Sunday, November 16, 2025

ಬೆಲ್ಜಿಯಂ ಕಲಾ ವೇದಿಕೆ - ವರ್ಷ ೧

ಬೆಲ್ಜಿಯಂ ಕಲಾ ವೇದಿಕೆ ಇಂದಿಗೆ ತನ್ನ ಮೊದಲ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ  ಆಚರಿಸಿಕೊಂಡಿದೆ. ಇಡೀ ವರ್ಷದ ಪಯಣವನ್ನ ತಕ್ಕ ಮಟ್ಟಿಗೆ ಹತ್ತಿರದಿಂದ ನೋಡಿರುವದರಿಂದ ಸಹಜವಾಗಿಯೇ ಬೆಲ್ಜಿಯಂ ಕಲಾ ವೇದಿಕೆ ಅನ್ನೋ ಹೆಸರು ಗೊತ್ತಿಲ್ಲದೇ ನಲ್ಮೆಯ, ಹೆಮ್ಮೆಯ , ಸ್ನೇಹದ ಭಾವವನ್ನು ಮೂಡಿಸುತ್ತದೆ.

 ಆ ಸಂಭ್ರಮದ ನೆನಪಿಗೆ ನನ್ನ ಸಣ್ಣ ಟಿಪ್ಪಣಿ, ಮನಸ್ಸಿನಿಂದ.

ನಮ್ಮ ದೇಶ, ಭಾಷೆ, ಜನ, ಕಲೆ, ಕಲಾವಿದರು, ಊಟ, ಪ್ರೀತಿ, ಸ್ನೇಹ, ಭಾವ, ಬದುಕು ಎಲ್ಲಾ ಬಿಟ್ಟು ಏನೋ ಒಂದು ಹುಚ್ಚು ಆಸೆ, ಹುಮ್ಮಸ್ಸು, ಕನಸಿಗಾಗಿ ಸುಮಾರು ಏಳು-ಎಂಟು ಸಾವಿರ ಕಿಮಿ ದೂರ  ಬೆಲ್ಜಿಯಂ ಅನ್ನೋ ದೇಶಕ್ಕೆ ಬಂದಾಗ, ಮೊದಲ 5 - 6 ವರ್ಷ ಇಲ್ಲಿನ ಜನರ ಭಾಷೆ, ನಡೆ-ನುಡಿ, ಸ್ನೇಹ, ಒಡನಾಟ, ಕೆಲಸ, ಮನೆ, ಮಕ್ಕಳು ಅನ್ನೋ ವಿಷಯದಲ್ಲೇ ಕರಗಿ ಹೋಗಿತ್ತು. 

ಅಲ್ಲಿಗೆ, ನಾವು ಏನೇ ಪ್ರಯತ್ನ ಪಟ್ಟರು ಎಲ್ಲೋ ಒಂದು ರೀತಿಲಿ, ಈ ದೇಶದ ಜನರಿಗೆ ನಾವು ಯಾವಾಗಲು ಹೊರಗಿನವರೇ ಅನ್ನೋ ಕೂಗು ಇಮ್ಮಡಿಯಾಗುತ್ತಲೇ ಇತ್ತು. ನಮ್ಮ ಜನ, ಭಾಷೆ, ಸಂಸ್ಕೃತಿ, ಹಬ್ಬ, ಕಲೆ, ಸಂಗೀತ, ಹಬ್ಬದ ಅಡಿಗೆ, ಕೂಡಿ ಕನ್ನಡಲ್ಲಿ ಹರಟೆ ಹೊಡೆಯೋ ಗುಂಪಿಗಾಗಿ ಹಾತೊರೆಯುತ್ತಲೇ ಇತ್ತು. ಅಂತಹ ವಿಚಲಿತ , ಹತಾಶ ಮನೋಭಾವದಲ್ಲಿದಾಗ ನನ್ನ ಸ್ನೇಹಿತರ ಮೂಲಕ ಪರಿಚಯವಾಗಿದ್ದು ಡಾ. ನವೀನ ಶೆಟ್ಟಿ ಹಾಗು ಅವರ ಕನ್ನಡ, ಕಲೆ, ಸಂಸ್ಕೃತಿ, ಪರಂಪರೆ ಬಗೆಗಿನ ಒಲವು-ಪ್ರೀತಿ. 

ಒಂದು ಊರಿಂದ - ಇನ್ನೊಂದು ಊರಿಗೆ ಬಂದಾಗ್ಲೇ, ನಮ್ಮೋರು ಅಂತ ಸಿಗೋದು ಕಷ್ಟವಿರುವಾಗ, ದೇಶ ಬಿಟ್ಟು ಬೇರೆ ದೇಶಕ್ಕೆ ಬಂದು, ಎಲ್ಲಾ ಕನ್ನಡಿಗರನ್ನು ಸೇರಿಸಿ, ನಮ್ಮ ನಾಡ ಸಂಸ್ಕೃತಿ - ಪರಂಪರೆ , ಭಾಷೆ , ಹಬ್ಬ, ಕಲೆಯನ್ನು ಆಚರಿಸುವ ಕಾರ್ಯಕ್ಕೆ ಕೈ ಹಾಕುವುದು ಸಾಮಾನ್ಯದ ಮಾತಲ್ಲ. ನನ್ನ ಪ್ರಕಾರ ಅದೊಂತರ ಭಗೀರಥ ಪ್ರಯತ್ನ. 

ಆ ಪ್ರಯತ್ನದಲ್ಲಿ ಈಗ ನನ್ನ ಗೆಳೆಯರಾಗಿರುವ ಡಾ. ನವೀನ್ ಹಾಗು ಅವರ ಧರ್ಮಪತ್ನಿ ರಶ್ಮಿ, ಬೆಲ್ಜಿಯಂ ಕಲಾ ವೇದಿಕೆ ಮೂಲಕ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಒಂದು ವರ್ಷದ ಪಯಣದಲ್ಲಿ ಅನೇಕ ಮನ ಮುಟ್ಟುವ, ಹುಬ್ಬೇರಿಸುವ, ಬೇರೆಯವರಿಗೆ ದಾರಿ ದೀಪವಾಗುವ, ಮೂಗು ಮುರಿಯುವರ ಮೂಗಿನ ಮೇಲೆ ಬೊಟ್ಟು ಇಟ್ಟುಕೂರುವ ರೀತಿಯಲ್ಲಿ ತಡವಿರದೆ ಸ್ವ ಪ್ರೇರಣೆಯಿಂದ ಯಶಸ್ವಿಯಾಗಿದ್ದಾರೆ.

ಆ ಯಶಸ್ಸಲ್ಲಿ ಅನೇಕರ ಪಾತ್ರವಿದೆ, ಒಳ್ಳೆಯವರ ಆಶೀರ್ವಾದವಿದೆ, ದೊಡ್ಡವರ ಮಾರ್ಗದರ್ಶನವಿದೆ , ಸ್ನೇಹಿತರ ಸಹಕಾರವಿದೆ, ಕಲಾವಿದರ ಕೃತಿಯಿದೆ , ಕನ್ನಡಿಗರ ಬೆಂಬಲ ಹಾಗೂ ಹಿತ ಶತ್ರುಗಳ ಪ್ರೇರಣೆಯಂತೂ ಖಂಡಿತ ಇದೆ.  

ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ , ನಮ್ಮ ಜನರ ಬಗೆಗಿನ ಹುಚ್ಚು ಆಸೆ, ಪ್ರೀತಿ, ಹುಮ್ಮಸ್ಸು, ಒಲವು ಇಟ್ಟುಕೊಂಡು,ಬೆಲ್ಜಿಯಂ ಕಲಾ ವೇದಿಕೆ ಅನ್ನೋ ಬೃಹತ್ ಸ್ನೇಹಿತರ-ಸ್ನೇಹದ, ಗೌರವ-ಗಾಂಭೀರ್ಯದಿಂದ ಕೂಡಿದ, ಪರಿಚಯ-ಪ್ರೋತ್ಸಾಹದಿಂದ ತುಂಬಿರುವ, ಬಳಗದ ರೂವಾರಿಗಳಾದ ನವೀನ್ ಹಾಗು ರಶ್ಮಿಯವರಿಗೆ ಈ ಶ್ರೇಯ ನ್ಯಾಯಸಮ್ಮತವಾದದ್ದು ಅನಿಸುತ್ತದೆ. 

ನಮ್ಮಂತೆಯೇ ಅವರು ಕೂಡ ಕೆಲಸ, ಮನೆ, ಮಗು, ಪ್ರಮೋಷನ್ , ಹೈಕ್, ಟ್ರಿಪ್ಸ್, ಸೇವಿಂಗ್ಸ್ ಅಂತಾ ಸುಮ್ನೆ ಕೂರ ಬಹುದಿತ್ತು. ಆಗ ಅವರಿಗೆ ನಿಷ್ಕಲ್ಮಶ  ಪ್ರಯತ್ನಕ್ಕೆ ನೋವು, ಸಂಕಟ ಅನುಭವಿಸುವ ಅಗತ್ಯ ಇರಲಿಲ್ಲ. ಇರಲಿ ಗೆದ್ದೆತ್ತಿನ ಬಾಲ ಹಿಡಿಯೋ ಜನರು ಎಲ್ಲಾ ಕಡೆ ಇರುತ್ತಾರೆ.

Anyways , ಹೇಳೋಕೆ ತುಂಬಾ ಇದೆ, ಆದರೆ ಇನ್ನೊಂದಿನ ಹೇಳೋಣ, ಈಗ, ವರ್ಷದ ಪಯಣ ಮುಗಿಸಿರುವ ಬೆಲ್ಜಿಯಂ ಕಲಾ ವೇದಿಕೆ , ತನ್ನದೇ ಆದ ವಿಭಿನ್ನ, ವಿಶಿಷ್ಟ, ಕಾರ್ಯಕ್ರಮಗಳನ್ನು ಇನ್ನಷ್ಟು ಮತ್ತಷ್ಟು ಮಾಡಲಿ, ನೂರಾರು ವರುಷ ನಮ್ಮ ನಾಡು- ನುಡಿ, ಭಾಷೆ-ಭಾವ, ಸಂಸ್ಕೃತಿ ಪರಂಪರೆಯ ಪರಿಮಳವನ್ನು ಹೀಗೆ ಪಸರಿಸುತ್ತಾ ಸಾಗಲಿ ಅಂತ ಆಶಯಿಸೋ....


- ಕನ್ನಡಿಗ 

Friday, September 9, 2022

ಬಂಗಾರು

ಒಲವಿನ, ಕನಸಿನ ಬದುಕಿಗೊಂದು ಉಡುಗೊರೆಯಾಗಿ ಬಂದ ಆ ಮುದ್ದಾದ ಮನಸ್ಸಿಗೆ ಈಗ ಮೂರು ವರ್ಷ, ಮೂರು ತಿಂಗಳು ಮತ್ತು ಮೂರು ದಿನ. ಎಷ್ಟೋ ಸಲ ಆ ನಿಷ್ಕಲ್ಮಶ, ಮುಗ್ದ, ಬೆರಗಿನ ಜೀವದ ಬಗ್ಗೆ ಬರೆಯುವ ಆಸೆ ಅಪಾರವಾಗಿದ್ದರು, ಆ ಆಸೆ ಎಂದೂ ಕೃತಿ ರೂಪಕ್ಕೆ ಬರಲೇ ಇಲ್ಲ. ಆ ಜೀವದ ತುಂಟಾಟ, ಕಳ್ಳಾಟ , ಚೇಷ್ಟೆಗಳೆಲ್ಲ ಆಹ್ಲಾದಿಸುವದರಲ್ಲೇ ಕಣ್ಮನ ತುಂಬಿ ಬರುತ್ತಿತ್ತು, ಈಗ ತನ್ನ ಅಮ್ಮ ಹಾಗು ತಮ್ಮನ ಜೊತೆ ಸುಮಾರು 7800 ಕಿ.ಮೀ ದೂರದ ಮೈಸೂರಿನಲ್ಲಿ ತನ್ನದೇ ಗುಂಗಿನಲ್ಲಿ ಎಲ್ಲರೊಟ್ಟಿಗೆ ತಾನು ಒಬ್ಬಳಾಗಿ ಆಟಾಡುವದನ್ನು ನೋಡುತ್ತಾ ಇದ್ದಾರೆ, ಕೈ ಮನಃ ತಡೆಯದೆ ಒಂದೆರೆಡು ಪದ ಬರೆಯಲು ಕೂತಿದ್ದೇನೆ.

ಹೌದು, This post is dedicated to my sweetest , cutest and beautiful daughter . ನನ್ನ ಮಗಳು ಹಿತಾನ್ಯ ಬಗ್ಗೆ. ನನ್ನ ಮುದ್ದು ಬಂಗಾರು ಬಗ್ಗೆ. My very own "Soothing Happiness " ಬಗ್ಗೆ.  

ಕನ್ನಡ-ಆಂಗ್ಲ ಪದಗಳನ್ನು ಒಂದೇ ಉಸಿರಲ್ಲಿ, ಒಂದೇ ಅಂಕಣದಲ್ಲಿ ಬರೆಯೋದು ನನ್ನ ಶೈಲಿ ಅಲ್ಲ, ಆದರೆ ಎಲ್ಲಾ ಭಾಷೆಯ ಪದಗಳು ತನ್ನದೇ ಆದ ಭಾವನೆಗಳು ಹೊರ ಹಾಕುತ್ತವೆ ಅನ್ನೊ ನಂಬಿಕೆ ನನ್ನದು. ಈ ಅಂಕಣ ಭಾವನೆಗಳನ್ನು ಬುಡಕಟ್ಟಾಗಿಟ್ಟುಕೊಂಡು ಬರೆಯುತ್ತಿರುವದಿರಂದ ಶೈಲಿ ಬಗ್ಗೆ ಜಾಸ್ತಿ ತಲೆ ಕೆಡಸಿ ಕೊಳ್ಳೋದಿಲ್ಲ. 

Now back to the topic , ಜೂನ್ 6 , 2019 . ಆ ಶುಭ ಘಳಿಗೆ ಇನ್ನು ಮನಸ್ಸಿನಲ್ಲಿ ಹಾಗೆ ಅಚ್ಚು ಹೊತ್ತಿದ ಹಾಗೆ ಕೂತಿದೆ. ನನ್ನ ಒಲವಿನ ಹೆಂಡತಿ 9 ತಿಂಗಳು ಹೊತ್ತುತಿರುಗಿ ಆರೈಕೆ ಮಾಡಿದಂತಹ ಕೂಸು ನನ್ನ ಕೈ ಸೇರಿದ ದಿನ. ಮೊದಲ ಬಾರಿ ಆ ಮುದ್ದಾದ ಕಣ್ಣುಗಳನ್ನು ನೋಡಿದ ಕ್ಷಣ. ಆ ಚಿಗುರು ಕೈಗಳು ನನ್ನ ಬೆರಳನ್ನು ಹಿಡಿದ ಕ್ಷಣ. ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತನ್ನ ಅಪ್ಪನ ಅಪ್ಪಿ-ತಬ್ಬಿದ ಕ್ಷಣ. ಇಷ್ಟೆಲ್ಲಾ ಸೊಗಸನ್ನು ನೋಡಿ ಜೀವನವೇ ಸಾರ್ಥಕ ಎಂದು ಅನಿಸಿದ ಕ್ಷಣ. 

ಆ ಕ್ಷಣದಲ್ಲಿದ್ದ "ಹಿತ" ಇಂದಿಗೂ ಇಮ್ಮಡಿಯಾಗುತ್ತಲೇ ಇದೆ. ಆ ಆನಂದದ ಅಲೆಗಳು ಇಂದಿಗೂ ಮನಸ್ಸಿಗೆ ಖುಷಿ ನೀಡುತ್ತಲೇ ಇವೆ. ಇದೆಲ್ಲಾ ಭಾವನೆಗಳ ಸಮ್ಮಿಲನವಾಗಿಯೇ ಆ ಮುದ್ದಾದ ಜೀವವನ್ನು ಹಿತಾನ್ಯ, Soothing Happiness ಆಗಿ ಕರೆಯಲು ನನ್ನ ಜೀವದ ಒಡತಿ ಹಾಗು ನಾನು ನಿರ್ಧರಿಸಿದ್ದು. ಮನಸ್ಸಿಗೆ ಅನಿಸಿದ್ದು, ನಕ್ಷತ್ರ ಗ್ರಹ ಗತಿಗಳು ಹೇಳಿದ್ದು ಒಂದೇ ಪದದ ಹೆಸರು. ನನ್ನ ಬಂಗಾರು ನಿಜವಾಗಿಯೂ ದೇವರು ಕೊಟ್ಟ ಮಗಳು.

ತನ್ನ ಮೊದಲ ನಗು, ತನ್ನ ಮೊದಲ ಕೇಕೆ, ಮೊದಲ ಸಲ ಕೈ ಚಾಚಿ ಕೆನ್ನೆ ಸವರಿದ್ದು, ತೆವಲಿದ್ದು, ಅಂಬೆಗಾಲಲ್ಲಿ ಬಂದು ತೊಡೆ ಮೇಲೆ ಕೂತಿದ್ದು, ಮೊದಲ ಹೆಜ್ಜೆ ಇಟ್ಟಿದ್ದು, ಅಪ್ಪ ಆಮ್ಮ ಅಂತಾ ಬಾಯಿ ತುಂಬ ಕರೆದಿದ್ದು ಎಲ್ಲವು ಇನ್ನು ನೆನ್ನೆ ಅಷ್ಟೇ ನಡೆದಿದ್ದು ಅನ್ನೋ ರೀತಿಯಲ್ಲಿ ವರ್ಷಗಳು ಕಳೆದವು. ಇದೆಲ್ಲ, ಎಲ್ಲಾ ತಂದೆ ತಾಯಂದಿರು ಕಣ್ಣು ತುಂಬಾ ನೋಡಿ ಖುಷಿ ಪಟ್ಟಿರುತ್ತಾರೆ. Those moments are truly priceless . It's once in a lifetime experience. You just have to soak yourself in it and be blessed. 

ಎಲ್ಲಾ ಹೆಣ್ಣು ಮಕ್ಕಳು ತನ್ನ ತಂದೆಯ ಬಗ್ಗೆ ಹೆಚ್ಚು ಒಲವು ಇಟ್ಟು ಕೊಂಡಿರುತ್ತಾರೆ ಅಂತ ಕೇಳಿದ್ದೆ ಚಲನ ಚಿತ್ರಗಲ್ಲಿ ನೋಡಿದ್ದೆ, ಆದರೆ ನನ್ನ ಮಗಳು ಆ ಒಲವನ್ನು ತನ್ನದೇ ಸೊಗಸಿನಲ್ಲಿ, ಮುತ್ತಿಟ್ಟು ದಿನಂಪ್ರತಿ ಧಾರೆಯರಿವುದು ನೋಡುವಾಗ, ನನಗಿಂತ ಪುಣ್ಯವಂತ ಯಾರು ಇಲ್ಲ ಎಂದೆನಿಸುತ್ತದೆ. ಕಚೇರಿ ಇಂದ ವಾಪಸ್ಸು ಬಂದಾಗ, ಅಂಗಡಿ ಇಂದ ತಿರುಗಿ ಬಂದಾಗ, ಬಾಗಿಲ ಶಬ್ದ ಕೇಳಿಸಿದ ತಕ್ಷಣ ತನ್ನ ಪುಟ್ಟ ಹೆಜ್ಜೆ ಇಟ್ಟು ಓಡಿಬಂದು ತಬ್ಬಿದಾಗ ಸಿಗುವ ಆನಂದಕ್ಕೆ, ಆ ಅಕ್ಕರೆಗೆ, ಆ ಪ್ರೀತಿಗೆ ಪಾರವೇ ಇಲ್ಲ. ಅಪ್ಪ ಒಂದು ನಿಮಿಷ ಕಾಣದೆ ಇದ್ದಾಗ ಸ್ವತಃ ತಾನೇ ಮನೆಯಲ್ಲಾ ಹುಡುಕಿ, ಮೂರನೇ ಮಹಡಿಗೆ ಬಂದು, ಅಪ್ಪನನ್ನು ನೋಡಿ, ಅಪ್ಪ ನೀನು ಒಬ್ಬನೇ ಯಾಕೆ ಇಲ್ಲಿದ್ದೀಯ ಎಂದು ತೋರುವ ಪರಿಶುದ್ಧ ಕಾಳಜಿಯನ್ನು ಕಂಡಾಗ ಮೂಡೋ ಉಲ್ಲಾಸವನ್ನು ವರ್ಣಿಸಲು ಪದಗಳು ಸಾಲದು. ಅದನ್ನು ಮೆಲುಕು ಹಾಕಿದಾಗ ಅನಿಸೋದು, ಪ್ರಾಯಶಃ ಜೀವನ ಇಷ್ಟೇ, ಈ ಸಣ್ಣ ಪುಟ್ಟ ಆನಂದಗಳು ಸೇರಿ ಆಗೋ ಮಹಾಸಮುದ್ರ . Life is nothing but a collection of beautiful memories. 

ನನ್ನ ಬಂಗಾರು ಪ್ರಾಯ ಮೂರಾದರೂ ಆಕೆ ತೋರೊ ಪ್ರಭುದ್ದತೆ , ಸಂಯಮ, ತರ್ಕ, ತರ್ಕದ ಮೂಲಕ ಹುಡುಕುವ ಅರ್ಥ, ಆ ಅರ್ಥಕ್ಕೆ ತನ್ನದೇ ಸೊಗಸಿನಿಂದ ಕೊಡುವ ಸಮಾಧಾನ, ಭಾಷೆಗಳಾಚೆ ಮೂಡುವ ಭಾವನೆಗಳನ್ನು ಹಿಡಿದು ಓಲೈಸುವ ಗುಣ, ತನ್ನ ಮುದ್ದಾದ ತಮ್ಮನಿಗೆ ಧಾರೆಯೆರೆಯುವ ಪ್ರೀತಿ, ಅಮ್ಮ ಯಾವಾಗಲೂ ತಮ್ಮನ ಜೊತೆ ಇರುತ್ತಾಳೆ ಅನ್ನೋ ಅಸೂಯೆ ಇದ್ದರೂ ಎಂದೂ ಅಮ್ಮನ ಮೇಲೆ ಆಗಲಿ, ತಮ್ಮನ ಮೇಲೆ ಆಗಲಿ ತೋರದ ಕೋಪ. ತನ್ನ ಜೀವದ ಗೆಳಯವಾಗಿರೂ ಜೀವವಿಲ್ಲದ ಬೌ ಬೌ ಮೇಲೆ ತೋರೋ ಬೆಟ್ಟದಷ್ಟು ಪ್ರೀತಿ , ತನಗೆ ಎಲ್ಲರು ಬೇಕು ಅನ್ನೋ ಹಂಬಲ , ಇವೆಲ್ಲವನ್ನೂ ನೋಡಿದರೆ ಅನಿಸೋದು ಇಷ್ಟೇ, As parents there is nothing more we can teach her here. ಎಷ್ಟೋ ಸಾರಿ ಅವಳಿಂದ ಕಲಿಯೋದು ಬಹಳಷ್ಟಿದೆ ಎಂದನಿಸುತ್ತದೆ. I'm not exaggerating at all.

ಬದುಕು ಎಲ್ಲಾ ಕೊಟ್ಟಿದೆಯೋ ಇಲ್ವೋ, ಆದರೆ ಮಗಳ ರೂಪದಲ್ಲಿ ಪ್ರೀತಿಯ ಸಾಗರವನ್ನೇ ಧಾರೆಯೆರೆದಿದೆ. ಆ ದೇವರಿಗೆ, ನನ್ನ ಒಡತಿಗೆ ನಾನೆಂದೆಂದಿಗೂ ಆಭಾರಿ.

ಮಗಳು ದೊಡ್ಡವಳಾಗಿ ಯಾವ ಡಿಗ್ರಿ ತಗೋತಾಳೆ ಗೊತ್ತಿಲ್ಲ, ಎಷ್ಟು ದುಡೀತಾಳೆ ಗೊತ್ತಿಲ್ಲ , ಆದರೆ ಆಕೆ ಬದುಕು ಅನ್ನೋ ಪರೀಕ್ಷೆಯಲ್ಲಿ ಎಂದೂ ಸೋಲೊದಿಲ್ಲ ಅನ್ನೋ ನಂಬಿಕೆ ಅಪಾರವಾಗಿದೆ. She will show to the world that she has arrived.

To all the beautiful daughters out there, even  if you realize it or not you have made your father proud the day you were born. So, Chin up, wear the Crown and rule the World.

Saturday, November 3, 2018

ಅಲೆಮಾರಿ!

ಸರಿ ಸುಮಾರು ಒಂದು ವರುಷದ ನಂತರ, ಮತ್ತೊಮ್ಮೆ ಮನದಾಳದ ಮಾತನ್ನು ಕೃತಿ ರೂಪದಲ್ಲಿ ಇಡುವ ಆಸೆ.

ಬಿಡುವಿಲ್ಲದ ಬದುಕಲ್ಲಿ ಮನಸಿಟ್ಟು ಬರೆಯಲು ಸ್ವಲ್ಪ ಸಮಯ ಸಿಕ್ಕಿತೆಂಬ ಖುಷಿ ಒಂದೆಡೆ ಆದರೆ, ಬರೆಯಬೇಕಂಬ ವಿಷಯಗಳ ಸಾಲಲ್ಲಿ ನಾ ಮುಂದು ತಾ ಮುಂದು ಎಂದು ಮನಸ್ಸಿನ ಕದ ತಟ್ಟುತ್ತಿರುವ ವಿಚಾರಗಳು ಹಲವಾರು.

ಕಳೆದ ಒಂದು ವರುಷದಲ್ಲಿ ನಡೆದ ಸಂಗತಿಗಳು, ಆದ ಸಿಹಿ-ಕಹಿ ಬದಲಾವಣೆಗಳು , ಎದೆ ತುಂಬಿ ಬಂದ ಸನ್ನಿವೇಶಗಳು, ಗೆದ್ದ ಯುದ್ಧಗಳು, ಸೋಲಿನಿಂದ ಕಲಿತ ಪಾಠಗಳು, ಚಿಗುರೊಡೆಯುವ ಮುನ್ನವೇ ಕರಗಿದ ಕನಸುಗಳು ನೂರೆಂಟು. ಆದದ್ದೆಲ್ಲ ಪಕ್ಕಕ್ಕಿಟ್ಟು, ಬದುಕೆಂಬ ಮುಗಿಯದ ಪಯಣಕ್ಕೆ, ವೈಚಾರಿಕ ತಳಹದಿ ಹಾಕಿ ನೋಡಿದಾಗ ಅನಿಸಿದ್ದು, ನಾನು ಅಲೆಮಾರಿ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಹಾಡಿನ ಸಾಲು ಅಕ್ಷರಃ ಸಹ ಸರಿಯೆನ್ನಿಸತೊಡಗಿದೆ. ಬದುಕು-ಬಯಕೆಗಳ ನಡುವೆ ದಿನನಿತ್ಯ ನಡೆಯುವ ನಿಲ್ಲದ ಚರ್ಚೆಗೆ ತರ್ಕಬದ್ದ ಉತ್ತರ ಹುಡುಕುವ ತವಕ ಬೆಟ್ಟದಷ್ಟು.

ಸರಿ-ತಪ್ಪು, ಖುಷಿ-ದುಃಖ, ಸೋಲು-ಗೆಲುವು, ಒಲವು-ವಿರಹಗಳ ನಡುವೆ ಹೆಜ್ಜೆಹೆಜ್ಜೆಗೂ ಲೆಕ್ಕ ಹಾಕಿ, ಬೆಳೆಕು ಕಂಡೆಡೆ ಸಾಗಿ, ನಾಳೆಯಂಬ ಕನಸ್ಸಿನ ಗಾಳಿ ಗೋಪುರಕ್ಕೆ ಹಾತೊರೆದು ಬಾಳುವ ಬದುಕು, ಅಲೆಮಾರಿ ಬದುಕಲ್ಲವೇ ಎಂಬ ಪ್ರಶ್ನೆ ಮನೆ ಮಾಡಿ ಕೂತಿದೆ.

ಮನೆಯಂಗಳದಿಂದ ಶುರುವಾದ ಬಾಲ್ಯ ಕಳೆದು, ಶಾಲೆ ಮೆಟ್ಟಿಲೇರಿ, ಕಾಲೇಜಿನ ಡಿಗ್ರಿ ಪಡೆದು, ಸಿಕ್ಕ ಮೊದಲ ಸಂಬಳದಿಂದ ಶುರುವಾದ ಈ ಅಲೆಮಾರಿ ಬದುಕು ತಂದೆ-ತಾಯಿಯ ತ್ಯಾಗ, ಪ್ರೀತಿಯ ಆಸರೆಯ ಜೊತೆ ಜೊತೆಗೆ ಸಾಗಿ ತನ್ನದೇ ಕಾಣದ ಕಡಲಿನ ಕಡೆ ಮೈಯೊಡ್ಡಿ ನಿಂತಿರುತ್ತದೆ. ನಂತರ ಸಾಗುವ ಪಯಣಕೆ, ಅಲ್ಲಿ ತನಕ ಕಲೆತ ಪಾಠಗಳೇ ಆಸರೆ.

ನಾಳೆಯ ಅರಿವಿಲ್ಲದೆ, ಕಂಡದ್ದೆಲ್ಲ ಬೇಕೆಂಬ ಆಸೆಗೆ ಲಗಾಮು ಹಾಕಿ, ಸಿಗದ ಮೊದಲ ಪ್ರೀತಿಯನ್ನು ಹರಿಸಿ ಬೀಳ್ಕೊಟ್ಟು, ನನಸಾಗದ ಕನಸುಗಳಿಗೆ ಗೂಡು ಕಟ್ಟಿ ಬಚ್ಚಿಟ್ಟು, ಹೊರನಡೆದ ಜೀವಗಳ ನೆನೆಯುತ್ತ, ಇರುವ ಗೆಳೆತನ ಸವೆಯುತ್ತಾ, ಬೆಳಕು ಕಂಡೆಡೆ ಹಾರುವ ಈಚಲು ಹುಳದ ಹಾಗೆ, ಅಲೆಮಾರಿ ಜೀವನ ದೂರದ ಬೆಳಕ ಆರಿಸಿ ನಡೆದು ಬಂದು ಬಿಡುತ್ತದೆ.

ಈ ಅಲೆಮಾರಿ ಬದುಕಿಗೆ, ಬೆಳಕು ಕಾಣದಿದ್ದಾಗ ಆಗುವ ತಳಮಳಕ್ಕೆ, ಕಟ್ಟಿದ್ದ ಗಾಳಿ ಗೋಪುರ ನೆಲಸಮವಾದಾಗ ಬೇಕಾದ ಸಾಂತ್ವನಕ್ಕೆ ಸಿಕ್ಕ ಉತ್ತರವೇ, ನನ್ನ ಮುದ್ದಾದ ಮಡದಿ. ಆಕೆಯಿಂದ ಸಿಗುವ ನಿಷ್ಕಲ್ಮಶ ಒಲವು, ನಂಬಿಕೆ, ಸ್ಪೂರ್ತಿ, ಬದುಕಿನೆಡೆಗೆ ಇರುವ ಆಸೆಯನ್ನು ಇಮ್ಮಡಿಗೊಳಿಸಿ ಇನ್ನಷ್ಷ್ಟು ಮತ್ತಷ್ಟು ಆಕೆಯನ್ನು ಜೋಪಾನಮಾಡುವ, ಜೊತೆ-ಜೊತೆಗೆ ಕಾಣದ ಬೆಳಕನ್ನು ಹುಡುಕಿ, ಮತ್ತೊಂದು ಗಾಳಿ ಗೋಪುರ ಕಟ್ಟುವ ವಿಶ್ವಾಸ. ಈ ಅಲೆಮಾರಿ ಬದುಕಿಗೆ ಆಕೆಯೇ ನಲ್ಮೆಯ ಒಡನಾಡಿ.

ಹುಟ್ಟು-ಸಾವು, ನೋವು-ನಲಿವು, ಸುಖ-ದುಃಖಗಳಿಗೆ ಅಂಟಿಕೊಳ್ಳದೆ, ನಿರಂತರ ಪಯಣಕ್ಕೆ ಸೋತು, ಮನಮುಟ್ಟಿದ ಆಸರೆಯೊಂದಿಗೆ ಕಾಣದ ಕಡಲಿನೆಡೆಯೋ  ಅಥವಾ ದೂರದ ಬೆಳಕಿನೆಡೆಗೂ ಸಾಗುವ ಈ ಅಲೆಮಾರಿ ಬದುಕಿಗೊಂದು ಸಲಾಂ.

ಒಲವಿನ ಆಸರೆಯೊಡನೆ, ದೂರದ ಬೆಳಕಿನಡೆ ಸಾಗಿ,ಗಾಳಿ ಗೋಪುರ ಕಟ್ಟಿ ಹೆಸರಿಡುವ ಸಮಯ! ;-)

ಮತ್ತೆ ಸಿಗುವ!

Monday, September 11, 2017

ನೆನಪಿನ ದೋಣಿಯಲ್ಲಿ ನಾನು - ಭಾಗ ೩

ಕಾಲ್ಪನಿಕ ಕಥಾ ಹಂದರದಲ್ಲಿ ಮೂಡೋ ಎಷ್ಟೋ ಪಾತ್ರಗಳಲ್ಲಿ, ಸಂಧರ್ಭಗಳಲ್ಲಿ, ನೆನಪುಗಳ ಸರಮಾಲೆಯಲ್ಲಿ, ಕಣ್ಣಂಚಿನ ಆಸೆಗಳಲ್ಲಿ, ಹೃದಯದ ಪ್ರತಿ ಬಡಿತದಲ್ಲಿ, ನಡೆವ ನೂರು ದಾರಿಗಳಲ್ಲಿ, ಕರಗೋ ಸಹಸ್ರ ಕ್ಷಣಗಳಲ್ಲಿ, ಮನಸ್ಸಿನ ಅರಿವಿಲ್ಲದಂತೆ, ಮನಸ್ಸಿನ ಮನೆಗೆ, ಮನದ ಅಂಗಳದಲ್ಲಿ ಮೂಡೋ ಅನಿಮಿಯಿತಾ ಬಣ್ಣಗಳನ್ನು ಬಳೆದು, ಈ ಅಷ್ಟು ಆಸೆಗಳನ್ನು ಪೂರೈಸುವಂತಹ ಜೀವಕ್ಕೆ ಹಾತೊರೆದು ತೆರೆದ ಬಾಗಿಲ ಬಳಿ ಕಾದು ಕೂತಿರುತ್ತೇವೆ.

ಆ ಆಸೆಗಳಿಗೆ, ನೆನಪುಗಳಿಗೆ, ಕರಗಿಹೋದ ಭಾವನೆಗಳಿಗೆ ಒಂದು ಮೂರ್ತಿ ರೂಪ ಕೊಟ್ಟು ಆ ಬಣ್ಣದ ಮನೆಯಲ್ಲಿ ಕೂಡಿಸಿ ಅಕ್ಷತೆ ಹಾಕುವ ಬಯಕೆ. ನಿಜ ಜೀವನದ ಅಂಗವಲ್ಲದಿದ್ದರು, ಕಲಾವಿದನ ಕಲ್ಪನೆಗೆ ಎಟುಕದ ಮುಗಿಲು ಇಲ್ಲವೇ ಇಲ್ಲ ಅನ್ನೋ ಸ್ಫೂರ್ತಿಯೇ ಈ ಬರಹದ ತಳಹದಿ.

ನಾವೆಲ್ಲರೂ ಬಾಳಿನ ವಿವಿಧ ಹಂತಗಳನ್ನು, ವಿವಿಧ ರೀತಿಯಲ್ಲಿ, ಬಗೆ ಬಗೆಯ ಅನುಭವಗಳಿಗೆ ಮೈಯೊಡ್ಡಿ, ಸಿಹಿ-ಕಹಿ, ನೋವು-ನಲಿವು, ಆಸೆ-ಆಕಾಂಕ್ಷೆಗಳನ್ನು, ನಮ್ಮದೇ ಶೈಲಿಯಲ್ಲಿ ಗಳಿಸಿ, ಸಿಗದೇ ಇದ್ದಾಗ ಇಲ್ಲದ ಮನಸಲ್ಲಿ ಬೀಳ್ಕೊಟ್ಟು, ಆ ನೆನಪಿನ ದಾರಿಯಲ್ಲಿ ಒಂದು ಗೂಡು ಕಟ್ಟಿ ಬಂದಿರುತ್ತೇವೆ.

ಆ ಎಲ್ಲ ಹಂತಗಳಲ್ಲಿ ತುಂಬಾ ಕ್ರಿಯಾತ್ಮಕವಾದ ೧೮-೨೬ ರ ವಯಸ್ಸೇ ನಮ್ಮನ್ನು ಕಡೆವರೆಗೂ ಎಡಬಿಡದೆ ಕಾಡೋ ನೆನಪುಗಳ, ಆಸೆಗಳ, ಭಾವನೆಗಳ ಒಡೆಯ. ಈ ವಯಸ್ಸು ಎಂತಹದೆಂದರೆ, ವಾಸ್ತವಿಕ ಪ್ರಪಂಚಕ್ಕೆ ರೆಕ್ಕೆ ಪುಕ್ಕ ಕೊಟ್ಟು, ಅರಿಯದ ಆಗಸದ ಉತ್ತುಂಗಕ್ಕೆ ಕರೆದೊಯ್ದು ಬಿಡುತ್ತದೆ.

ಇಂತಹ ಹಲವಾರು ಹಾರಾಟಗಳಲ್ಲಿ ಮೂಡಿದ ಒಂದು ಮೂರ್ತಿಯ ಬಗ್ಗೆ ಬರೆಯುವ ಬಯಕೆ. ತಾರುಣ್ಯದಲ್ಲಿ ಬರುವ ಯೋಚನೆಗಳಿಗೆ ವ್ಯವಿಧ್ಯತೆಯ ಕೊರತೆ ಇಲ್ಲದಿದ್ದರೂ, ಪ್ರಮುಖವಾಗಿ, ಒಂದು ಬಾಲೆಯ ನೆನಪು ತುಳುಕು ಹಾಕಿರುತ್ತೆ.

ಎಲ್ಲರು ಸಹ ತಮ್ಮದೇ ರೀತಿಯಲ್ಲಿ ಒಂದು ಹುಡುಗಿಯ ಬಗ್ಗೆ ಆದರದ, ಪ್ರೀತಿಯ, ಅಭಿಮಾನದ ಒಲವು ಬಚ್ಚಿಟ್ಟಿರುತ್ತಾರೆ. ಸಹಜವಾಗಿಯೇ ವಯಸ್ಸಿನ ಬಯಕೆಯೋ, ಪ್ರಕೃತಿಯ ಇಚ್ಛೆಯೋ ನಾನು ಕೂಡ ಒಂದು ಹುಡುಗಿಯ ಹಾವ-ಭಾವ, ನಡಿಗೆ, ನಗು, ಮಾತು, ಅಚ್ಚರಿಯ ಭಾವ, ಸಂಕೋಚದ ಸಲಿಗೆ, ವಾರೆ ನೋಟ, ತುಟಿಯಂಚಿನ ನಗೆ, ಕಾಡಿಗೆ, ಬೊಂಬೆಯಂತಹ ಮೊಗಕೆ ಮಾಡಿದ ಸಿಂಗಾರ, ವಾರ್ಷಿಕೋತ್ಸವಕ್ಕೆ ಉಟ್ಟ ಸೀರೆ, ಘಮ ಘಮಿಸುವ ಮಲ್ಲಿಗೆ ಹೂವು, ಕೆನ್ನೆ ಗುಳಿ ಬಳಿ ಸರಿದಾಡೋ ರೇಷ್ಮೆಯಂತಹ ಕೂದಲು, ಎಲ್ಲವು ಸೇರಿ ಮನಸ್ಸಿನ ತುಂಬೆಲ್ಲ ಭಾವನೆಗಳ ಉನ್ಮಾದಕ್ಕೆ ಭದ್ರವಾದ ಅಡಿಪಾಯ ಹಾಕಲು ಬಿಟ್ಟಿದ್ದೆ.

ಬಾಳ ಹಡಗಿನ ದಾರಿ ಸಮುದ್ರದ ಅಲೆಗಳಿಗೋ, ಅಥವಾ ಬೀಸುವ ಗಾಳಿಗೆ ತಲೆಬಾಗೋ, ದಾರಿ ಬದಲಿಸಿದಾಗ, ನಗು ನಗುತ್ತಲೇ ಸಾಗಿ ಬಿಡುತ್ತೇವೆ. ಆ ವಯಸ್ಸಿನ ಅಭಿಮಾನ ಒಲವೇ ಅಂತದ್ದು. ಮನಸ್ಸಲ್ಲಿ ತಮ್ಮದೇ ಛಾಪು ಮೂಡಿಸಿದವರ ಬಗ್ಗೆ ಆದರದ ಭಾವ ಒಳ್ಳೇದನ್ನೇ ಬಯಸುತ್ತ ಮುಂದೆ ಸಾಗುತ್ತದೆ.

ಈ ರೀತಿ, ಕಲ್ಪನೆಯ ಕದ ತಟ್ಟಿದ ಬೆಡಗಿ, ನಾ ಚಾಹ ಕುಡಿಯಲು ಕೂತಿದ್ದ ಮೇಜಿನ ಕೂಗಳತೆ ದೂರದಲ್ಲಿ ಕಂಡರೆ, ಆಗುವ ತಳಮಳ , ಮಾತಾಡಿಸಬಹುದು ಅನ್ನೋ ಖುಷಿ, ಗುರುತು ಹಿಡಿಯಲ್ವೇನೋ ಅನ್ನೋ ಅಳುಕು, ಬರಿ ಹೈ ಅಲ್ಲೇ ಸಂಭಾಷಣೆ ಮುಗಿದು ಹೋದರೆ ಹೇಗೆ ಅನ್ನೋ ಪ್ರಶ್ನೆಗಳ ಹೂಗುಚ್ಛದೊಂದಿಗೆ ಮಾತಾಡಲು ಮುಂದಾದೆ.

ಸರಿಯಾಗಿ ಒಬ್ಬರನ್ನು ಒಬ್ಬರು ನೋಡದೆ ಸುಮಾರು ೩-೪  ವರ್ಷಗಳಾಗಿರಬಹುದು, ಆದರೂ ಇಂದಿಗೂ ನಮ್ಮ ಹುಡುಗರ ಮನ ಕೆಡಸಿದೆ ಅಂದಕ್ಕೆ ಕೊರತೆ ಕಾಣಲಿಲ್ಲ. ಜೊತೆ ಓದಿದವರು ಆಡುವ ಉಭಯಖುಶಲೋಪರಿ ಮಾತಾಡುತ್ತ, ಶಾಲಾ ಕಾಲೇಜಿನ ಸ್ಮರನೀಯ ಕ್ಷಣಗಳನ್ನು ನೆನೆಯುತ್ತ, ಒಂದು ಸುತ್ತು ನಾಲ್ಕು ವರ್ಷದ ಇಂಜಿನಿಯರಿಂಗ್ ಹಾದಿಯಲ್ಲಿ ಸಾಗಿ ಬರುವಷ್ಟರಲ್ಲಿ, ನಾಲ್ಕು ಸಮೋಸ, ೨ ಕಪ್ ಚಹಾ ಆಗೋಗಿದ್ದೆ ಗೊತ್ತಾಗಿಲ್ಲ.

ಮಾತು ದುಪ್ಪಟ್ಟಾದರು, ಅಳುಕು ಅಂಜಿಕೆ ಇಲ್ಲದ ವ್ಯಕ್ತಿತ್ವ ಅನ್ನೋದು ಕಾಲೇಜು ಮೆಟ್ಟಿಲತ್ತಿದಾಗಲೇ ಗೊತ್ತಾಗಿತ್ತು. ಗುರಿ ಮುಟ್ಟುವತನಕ ಗಮನ ಸಡಿಲಿಸದ ಸ್ಥಿರತೆ. ಮಾತುಗಳ ಪ್ರೌಢತೆ, ವಿಷಯಗಳ ಬಗೆಗಿನ ಜ್ಞಾನ, ಜೀವನದ ಸರಿ ತಪ್ಪುಗಳನ್ನೂ ಬೊಟ್ಟು ಮಾಡಿ ತೋರುಸಿತ್ತಿದಾಗ ಆಕೆ ಬಗೆಗಿನ ಅಭಿಮಾನ ಇಮ್ಮಡಿಯಾದಂತೆ ಭಾಸವಾಯಿತು. ಅಂದದ ಮೊಗಕೆ, ಚಂದದ ಮನಸ್ಸು ಎಂಬ ಭಾವವು ಮೂಡಿತ್ತು. ಕೆಲಸದ ಒತ್ತಡ, ವೀಸಾ ಬರದೇ ಇರೋ irritation , ಎರಡಂಕಿ ದಾಟದ salary hike , ಎಲ್ಲವು ಸಹ ಆಕೆಯ ಮಾತಿನ ಸೊಗಸಿನ ಮುಂದೆ ಸೋತು ಸುಣ್ಣವಾಗಿದ್ದವು.

ಮತ್ತೆ ಸಿಗೋಣ್ವಾ ಮೊಬೈಲ್ number  ಕೇಳ್ಬೇಕು ಅನ್ನೋ ಅಷ್ಟ್ರಲ್ಲಿ, ಆಕೆಯ fiance ಬಂದು ಕೈ ಕುಲಿಕಿದಾಗ ಚಿಗುರೊಡೆಯುತ್ತಿದ್ದ ಆಸೆ ಗೋಪುರ ಮೆಲ್ಲನೆ ತತ್ತರಿಸಿತು. ಕಷ್ಟದ ಮುಗುಳ್ನಗೆಯೊಂದಿಗೆ ಇಬ್ಬರನ್ನು ಬೀಳ್ಕೊಟ್ಟು, ನೆನಪಿನ ಹಾದಿಯಲ್ಲಿ ನೆಡೆದು ಬಂದೆ.
 
ಆ ಒಲವು, ಆದರ, ಅಭಿಮಾನ, ಮೆಲ್ಲನೆ ಒಳ್ಳೆ ಸ್ನೇಹಕ್ಕೆ ತಿರುಗಿ ಒಂದು ಅವಿನಾಭಾವ ಸಂಭಂದವಾಗಿ ಬೆಳೆದು, ಆಗಾಗ ಆಸರೆಯಾಗೋ ಗೆಳೆತಿಯಾಗಿ ಉಳಿದು ಬಿಡುವಂತಾದರೆ ಸಾಕು ಅನ್ನೋ ಭಾವವಿದ್ದರೂ, ಬಾಳಿನ ಹೊಸ ಅಧ್ಯಾಯ ಶುರು ಮಾಡುತ್ತಿರೋ ಹುಡುಗಿಗೆ ಮೆಲ್ಲನೆ ಮನ್ಸಲ್ಲೇ ಹಾರೈಸಿ ನಡೆದು ಬಂದೆ.

Saturday, January 14, 2017

ನೆನಪಿನ ದೋಣಿಯಲ್ಲಿ ನಾನು - ಭಾಗ ೨

ಸರ ಸರನೆ ಓಡಿಬಂದು, ಹತ್ತಿದ್ದ ಸಿಟಿ ಬಸ್ಸಲ್ಲಿ ಕೂತು, ಕಿವಿಗೆ ಸಣ್ಣನೆ ಕಿವಿಯಡಕ ಸಿಕ್ಕಿಸಿ, ನನ್ನದೇ ಲೋಕಕ್ಕೆ ಹೊಯ್ಯುವ ಹಾಡು ಕೇಳ ಕೂತೆ. ನಾನು ಯಾವಾಗಲೂ ಹಾಗೆ, ಓಡುವ ಬಸ್ಸಲ್ಲಿ ಕೂತು, ಹಾಡು ಕೇಳುತ್ತ, ಮರಗಳನ್ನು ಎಣಿಸುತ್ತ, ಗಾಳಿಯ ರಭಸಕ್ಕೆ ಮುಖಕೊಟ್ಟು, ನನ್ನದೇ ನೆನಪಿನ ಅಲೆಯಲ್ಲಿ, ಮನಸ್ಸನ್ನು ನನ್ನ ದೋಣಿಯ ನಾವಿಕನ ಮಾಡಿ, ಯಾರು ಮುಟ್ಟಿರದ ದ್ವೀಪವ ಮುಟ್ಟುವ ತವಕ.

ಹೀಗೆ ಪ್ರತಿದಿನವೂ ನಡೆಸುವ ಪಯಣದಲ್ಲಿ, ಮೂಡೋ ನೆನಪಿನ ಸರಮಾಲೆ ಇದೆಯಲ್ಲ, ಅದರಲ್ಲಿ ಸಿಗುವ ಖುಷಿಗೊ ಏನೋ, ಬಸ್ಸಿಗೂ ನನಿಗೂ ಒಂದು ಅವಿನಾಭಾವ ಸಂಭಂದ. ಒಂದೊಮ್ಮೆ ಪರಮಾತ್ಮನ ಭೇಟಿ ಯಾದರೆ, ನಾ ಕೇಳೋ ವರಗಳಲ್ಲಿ, ನಂಗೆ ಆಸೆ ಆದ ಕೂಡಲೇ ನಿಲ್ಲದೆ ಸಾಗೋ ಬಸ್ಸಲ್ಲಿ ಹತ್ತಿಸಿ, ಕರಗದ ಮುದ್ದಾದ ಹಾಡುಗಳ ಸರಮಾಲೆ ಹಿನ್ನಲೆಯಲ್ಲಿ ಮೂಡಲಿ ಅನ್ನುವ ವರ, ಮೊದಲ ಹತ್ತರಲ್ಲಿ ಇರುವುದಂತೂ ಖಚಿತ.

ಮಂಗಳೂರಿನಲ್ಲಿದ್ದಾಗ ನಡೆಯುತ್ತಿದ್ದ ಈ ಮೇಲಿನ ದಿನಚರಿಯಲ್ಲಿ, ಮೂಡಿದ ಒಂದು ನೆನಪಿನ ಪಯಣದ ಬಗ್ಗೆ ಬರೆಯೋ ಒಂದು ಸಣ್ಣ ಪ್ರಯತ್ನ.

ಅಂದು ಶುಕ್ರವಾರ, ಐಟಿಯಲ್ಲಿ ಕೆಲಸ ಮಾಡುವರಿಗೆಲ್ಲ ಅದೊಂತರ ಹಬ್ಬದ ದಿನ. ನಂಗೆ ಶುಕ್ರವಾರ ಅಂದಾಕ್ಷಣ ಅಂತಹದ್ದೇನು ಆಹ್ಲಾದಕರ ಒಲವಿಲ್ಲದಿದ್ದರು, ನನ್ನ ವೃತ್ತಿಪರ ಜೀವನದಲ್ಲಿ ಒಂದು ವಾರ ಮುಗಿಸಿದ ಧನ್ಯತಾ ಭಾವವಂತೂ ಇದ್ದೇಇತ್ತು. ಹೀಗೆ ನನ್ನ ಮೇಲಿನ ದಿನಚರಿಯಂತೆ ಬಸ್ಸನ್ನು ಹತ್ತಿ, ಕಿವಿಯಡಕ ಸಿಕ್ಕಿಸಿ ಹಾಡು ಕೇಳೋ ಹೊತ್ತಿಗೆ, ಕಣ್ಣು ಅಲ್ಲೇ ಎದುರಿಗೆ ಕೂತಿದ್ದ ಒಂದು ಪುಟ್ಟ ಸಂಸಾರದ ಕಡೆಗೆ ಬಿತ್ತು.

ಅಪ್ಪ, ಅಮ್ಮ, ಅಣ್ಣ ಮತ್ತು ಒಂದು ಮುದ್ದಾದ ತಂಗಿ ಇದ್ದಂತಹ ಸಂಸಾರ ಅದು. ನೋಡಲು ಮಾಧ್ಯಮ ವರ್ಗದ ಸಂಸಾರ ಎನ್ನುವಂತಿತ್ತು. ಅಣ್ಣ-ತಂಗಿ ಇಬ್ಬರು ಅವರ ತಂದೆ ತಾಯಿಯ ಮುಂದೆ ಕೂತಿದ್ದರು. ತಂದೆ ತಾಯಿಗೆ ಸದಾ ತಮ್ಮ ಮಕ್ಕಳ ಮೇಲೇ ಕಣ್ಣು. ಆ ನೋಟದಲ್ಲಿ ಮಕ್ಕಳ ಮೇಲಿನ ಪ್ರೀತಿಯೊಟ್ಟಿಗೆ, ತಮ್ಮ ಮುಂದಿನ ಜೀವನದ ಕನಸ್ಸು ಕೂಡ ಸಾಗಿತ್ತು.

ಆ ಸಂಸಾರವ ನೋಡಿದ ಕ್ಷಣವೇ ನನ್ನ ಮನಸ್ಸು ನನ್ನ ಬಾಲ್ಯದ ಕಡೆ ಮುಖ ಮಾಡಿ ನಿಂತಿತ್ತು. ಹುಟ್ಟಿದ್ದು ಸ್ವಲ್ಪ ಅನುಕೂಲಸ್ಥ ಸಮಯದಲ್ಲಾದರೂ, ನನಗೆ ತಪ್ಪು-ಒಪ್ಪಿನ ಅರಿವು ಮೂಡುವ ಒಳಗೆ, ನನ್ನ ತಂದೆ-ತಾಯಿಯ ಕಷ್ಟಗಳು ಸಾಲಾಗಿ ನಿಂತಿದ್ದವು. ವರುಷಗಳು ಕಳೆದವಾದರೂ ಕಷ್ಟಗಳು ಕರಗಲಿಲ್ಲ. ಸಂಬಂಧಿಗಳ ವಿರೋಧ, ಕುಹಕದ ನಡುವೆಯೂ ಕೂಡ ನನ್ನನು ಊರಲ್ಲಿದ್ದ ಪ್ರತಿಷ್ಠಿತ ಶಾಲೆಗೇ ಸೇರಿಸಿದ್ದರು. ಇನ್ನು ನನ್ನ ತಂಗಿ ಬರುವ ಒಳಗೆ, ನಮ್ಮ ಮನೆಯ ವಿಸ್ತಾರವು ಕಡಿಮೆಯಾಗಿತ್ತು. ತಂಗಿಯನ್ನು ಕೂಡ ಅದೇ ಶಾಲೆಗೇ ಸೇರಿಸಿದ್ದರು. ಪೋಷಕರಿಗೆ ಹಣದ ಕೊರತೆಯಿತ್ತಾದರೂ ಬದುಕಿಗೆ ನಮ್ಮ ಮೂಲಕ ಹೊಸ ಆಯಾಮ ಕೊಡಬೇಕೆಂಬುವ ಆಸೆಗೇನು ಕೊರತೆ ಇರಲಿಲ್ಲ. ಪ್ರತಿವರುಷವು ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಪಡೆಯುತ್ತಿದ್ದ ಕೊನೆ ವಿದ್ಯಾರ್ಥಿಗಳು ನಾವೇ. ಮೊದಲ ವರುಷ ಸ್ವಲ್ಪ ಮುಜುಗರ ಅನ್ನಿಸಿತ್ತಾದರೂ, ನಮ್ಮ ಪೋಷಕರು ಮಾಡುತ್ತಿದ್ದ ಹೋರಾಟದ ಮುಂದೆ ಈ ಮುಜುಗರ ಇಬ್ಬರಿಗೂ ಹೆಚ್ಚನಿಸಲಿಲ್ಲ. ಪೋಷಕರ ಹೋರಾಟ, ಸಂಬಂಧಿಗಳ ವಿರೋಧ-ಕುಹಕ, ಗೆಲ್ಲಬೇಕಂಬ ಆಸೆ, ನಮ್ಮನ್ನು ಜರಿದವರ ಮುಂದೆ ಎದೆಯುಬ್ಬಿಸಿ ನಡೆಯಬೇಕೆಂಬ ಕನಸು, ಎಲ್ಲವು ಸೇರಿ ನಮ್ಮಲ್ಲಿ, ನಮಗೆ ಅರಿವಿಲ್ಲದಂತೆ ಬದುಕುವ ಪಾಠ ತಿಳಿಸಿತ್ತು.

ನಾ ಓದಿದ ಶಾಲೆ, ಪೋಷಕರ ಹೋರಾಟ, ಅಪ್ಪನ ಅಂಗಡಿ, ಕೇಳಿದ್ದು ಸಿಗದ್ದಿದ್ದಾಗ ಮೂಡಿದ್ದ ಸಿಟ್ಟು, ಕತ್ತಲಾದರೂ ನಿಲ್ಲದ ಕ್ರಿಕೆಟ್ ಮ್ಯಾಚುಗಳು, ವಯಸ್ಸು ಇಪ್ಪತ್ತಾದರೂ ಸಿಗುತ್ತಿದ್ದ ಬರಿ ಹತ್ತು ರೂಪಾಯಿ, ಇಂಜಿನೀಯೆರಿಂಗ್ ಮಾಡುತ್ತಿದ್ದರು ನನ್ನ ಕೈಬಿಡದ ನನ್ನ ಸೈಕಲ್, ಸಮಯದ ಪರಿವೆ ಇಲ್ಲದೆ ಹರಟಲು ಸಿಗುತ್ತಿದ್ದ ಗೆಳೆಯರ ಬಳಗ, ಸಣ್ಣಗೆ ಮೂಡಿ ಕರಗೋಗಿದ್ದ ಒಂದು ಕ್ರಶ್, ಪದವಿ ಕಾಲೇಜಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆದ ಘಳಿಗೆ, ಕ್ಯಾಂಪಸ್ ಸೆಲೆಕ್ಷನ್ ಆಗಿದ್ದಾಗ ನನ್ನ ಕಂಡು ನನ್ನ ಅಮ್ಮನಲ್ಲಿ ಮೂಡಿದ್ದ ಸಾರ್ಥಕತೆಯ ಭಾವ,ಅಪ್ಪನಿಗೆ ತನ್ನ ಮಗನ ಮೇಲಿದ್ದ ಹೆಮ್ಮೆಯ ಬಗ್ಗೆ ಅಮ್ಮನಿಂದ ತಿಳಿದಾಗ ಆಗುತ್ತಿದ್ದ ಸಂತಸ, ಎಲ್ಲವು ಒಮ್ಮೆಲೇ ಕಣ್ಣು ಮುಂದೆ ಬಂದು ನಿಂತಂತಾಯಿತು.

ಈ ಅಷ್ಟು ವಿಷಯಗಳ ನಡುವೆ, ಮುಖ್ಯವಾದ ಒಂದಂಶವೆಂದರೆ ನನ್ನ ತಂದೆ-ತಾಯಿ. ಅವರು, ನಾನು ತಪ್ಪು ಮಾಡಿದ್ದಾಗ ತಿದ್ದಿದ್ದಾರೋ ಹೊರತು, ನನ್ನ ಯೋಚನಾ ಶಕ್ತಿಗೆ, ನನ್ನದೇ ರೂಪ ಕೊಡುವ ಸ್ವಾತಂತ್ರಕೊಟ್ಟಿದ್ದರು. ಕಷ್ಟ-ಕಾರ್ಪಣ್ಯಗಳ ನಡುವೆ ಬದುಕಿನ ಸಂತಸಗಳ ಅನುಭವಿಸೋ ಕಲೆ ಧಾರೆಯೆರೆದಿದ್ದರು. ಸೋತಾಗ ಕುಗ್ಗದೆ ಮುನ್ನಡೆಯಲು ಕಲಿಸಿದ್ದರು.

ಒಂದು ಮಗು, ಬೆಳೆದು ದೊಡ್ಡವನಾಗಿ , ತನ್ನ ಕಾಲ ಮೇಲೆ ತಾನು ನಿಲ್ಲುವವರಿಗೆ, ತಂದೆ-ತಾಯಿ ಮಾಡುವ ಹೋರಾಟ, ತ್ಯಾಗಕ್ಕೆಲ್ಲ ಬೆಲೆ ಕಟ್ಟಲು ಸಾಧ್ಯವೇ ಅನ್ನೋ ಸಣ್ಣ ಭಾವ ಮೂಡಿತ್ತು. ಆ ಭಾವದೊಂದಿಗೆ ಕಣ್ಣಾಡಿಸಿದಾಗ ಎದುರಿಗಿದ್ದಿದ್ದು ನನ್ನ ಮನೆಯ ದಾರಿ.ಆ ಭಾವದ ಬೆಳಕಲ್ಲಿ ಮನೆಯ ದಾರಿ ಹಿಡಿದು ನಡದೇ ಬಿಟ್ಟೆ.

ನೆನಪಿನ ದಾರಿಯಲ್ಲಿ ಮತ್ತೊಂದು ನೆನಪಿನೊಂದಿಗೆ ಮತ್ತೆ ಸಿಗೋಣ!

Tuesday, December 27, 2016

Love You Zindagi

When I started this blog, All I wanted to do was, have something of my own which I can leave behind to my friends, family and of-course my children. Especially for my kids, I wanted to set an example that Its okay for them to do mistakes, make some love, share a joy, build a dream, etc. I wanted to have something in hand which they could relate to for their age, so that i could say, It's one Life just make the most of it. For this reason alone, I never wanted to shy away from recording my emotions which passed through different stages of my life. Also, Whenever I have gone through an emotional roller coaster ride, I have made sure that I treasure it in the form of a blog post so that I can re-visit it as and when needed.

Yes, as you have already guessed, the title is Inspired by the recent movie 'Dear Zindagi'. The movie is beautifully scripted, touching each and every string of a beautiful guitar called LIFE. At the end, each strum results in a soulful music bringing back the LIFE into our rusted mechanical life.

Well, I'm not going to review the movie, nor am I going to evaluate about its merits and shortcomings, but I'm going to speak about the Life that replayed during the course of this movie.

We, aspire to be the one who is loved by all; It doesn't matter, what is one's profession or educational qualification, what is one's age or attire, what is one's gender or generation, at the end of day all you need is a soul near you who is happy seeing your happiness and a reason to get up everyday with a smile. All our life, we aim to get everything but that Soul and Smile. I just feel most of us has not set our priorities right at first place. We crave for the most materialistic things loosing on small happiness which cannot be reclaimed even after we are willing to spend a fortune on it. We compromise on Life's happiness for the things which are not necessary in a long run.

I, re-collected all the things, which I never did for the sake of things, which I never needed. Those friends I lost, just because, I failed to convey how important they were to me. Those laughter which I missed, just because, I missed being part of the occasion. Those photo-frames which didn't take my face, because, I chose a cricket match over the event. Those hugs I missed, just because I never worked on bringing a relationship back on its course. Those memories, which could have been even more beautiful, if I had put off my anger at the right time. Those decisions, which I didn't make, giving heed to my fear. Those mistakes, which I did without paying attention to my conscience. All those things, if i had acted little differently, would have made my Life even more beautiful than what it is now.

I'm not saying, I'm dis-satisfied with my current Life. I'm very much satisfied and grateful to have almost everything in my hand; a loving wife, a caring family, a decent job, a better future, "Touch wood" hope things stay that way. I'm just saying, I missed on important things of my life for things which were unimportant.
In-fact, I believe, its part and parcel of everyone's life because we tend to go with the short-lived things like anger, fear, trauma, hate, luxury, complacency etc instead of the more important things like family, friend, friendship, love, patience, hope, dream, forgiveness etc. We do realise that we missed all this, at certain stage of our life, but by that time, we have sailed too far with our lives, that we can't turn back and change things, as the decisions which we took or didn't take, has set the course of our Life's boat in certain direction, which cant be changed.

During the movie, I realised, Of course we cant change everything by bringing the past into present and hope to build a new future by correcting past mistakes. But at-least we can re-claim a part of it.
No one is perfect, nothing is permanent, Live-Love-Lead the life you like!

Signing off with this:

"Hum toh Sikander zaroor bane hain, iss neele samundar main, 
roka hain kisne hume, taaza hava khaane se
sooraj ki dhoop, chanda ki roshni chale hain saath main
roka hain kisne hume, apne raaste dhondne se
Chali hain safar, hazaron jaahajon se milte
roka hain kisne hume, hasi mazak baantne se
Alvida toh sabko kehna hain ek din
roka hain kisne hume, do pal milne se"

Sikandar hain hum, Geet gaata chalo, Gungunata chalo!

Sunday, September 4, 2016

ನೆನಪಿನ ದಾರಿಯಲ್ಲಿ, ನಾನು - ಭಾಗ 1

ನಾವು ಸಾಗೊ ಎಷ್ಟೋ ದಾರಿಯಲ್ಲಿ, ನಮಗೆ ಅರಿವಿಲ್ಲದಂತೆ ಆಗೋ ನೂರೆಂಟು ಪರಿಚಯಗಳಲ್ಲಿ ಮೆತ್ತಗೆ ನೆನಪಿನೆ ಹಾಳೆಯನ್ನು ಆವರಿಸಿಕೊಳ್ಳೋ ಒಂದು ಮೊಗವನ್ನರಿಸಿ ಬರೆಯೋಣ ಅಂತ ಕೂತಿದ್ದೇನೆ. ಈ ಪಾತ್ರವು, ಕಾಲ್ಪನಿಕ ಕಥಾ ಹಂದರ ಎಂಬ ಸಾಗರದಲ್ಲಿ ಸಾಗುವ ಒಂದು ಪುಟ್ಟ ದೋಣಿ ಅಷ್ಟೇ, ನನ್ನ ನಿಜ ಜೀವನದ ಪಯಣದಲ್ಲಿ ಸಿಕ್ಕ ಜೀವ ಅಲ್ಲ.

ಮೇಲಿನ ಪುಟ್ಟ ಮುನ್ನುಡಿಯನ್ನು ಎತ್ತಿಟ್ಟು ಮುಂದೆ ನಡೆಯೋಣವೇ?

ಮುಂಗಾರು ಮಳೆಯಲ್ಲಿ ಎಂತ ದುಃಖತಪ್ತ ಜೀವಕ್ಕೂ ಒಂದು ಗೆಲುವಿನ ಹುಮ್ಮಸ್ಸು ಕೊಡೊ ಶಕ್ತಿ ಇರುತ್ತೆ ಅಂತ ಕೇಳಿದ್ದೆ. ಅಂತಹ, ಘಮ ಘಮಿಸುವ ಮಂಗಳೂರಿನ ಮುಂಗಾರು ಮಳೆಯ ಸಂಜೆಯಲ್ಲಿ, ದಣಿದ ದೇಹಕ್ಕೆ ಬಿಸಿ ಚಹಾದ ಸಾಂತ್ವನ ಕೊಟ್ಟು, ಮುರುಕಲು ಕುರ್ಚಿಯ ತುದಿಯಲ್ಲಿ ಕೂತು ಹಾಗೆ ನನ್ನ ಸುತ್ತಲಿನ ಪ್ರಪಂಚವ ಆನಂದಿಸೋ ಆಸೆ ಆಯಿತು. ಕಣ್ಣುಹಾಯಿಸೋ ಕಡೆಯೆಲ್ಲೆಲ್ಲ ಹಚ್ಚ ಹಸಿರ ಅಂಗಿ ತೊಟ್ಟು , ಮುಂಗಾರಿನ ಸ್ಪರ್ಶಕ್ಕೆ ಮನದೊಳಗೆ ನಸು ನಗುತ್ತ ನಿಂತ ನೂರೆಂಟು ಗಿಡ-ಮರಗಳು. ಕಾರ್ಮೋಡ  ಹಾಗು ತಂಗಾಳಿಯ ನಡುವಲ್ಲಿ ಗೂಡು ಸೇರೋ ತವಕದಲ್ಲಿ ಹಾಡುತ್ತ ಸಾಗಿಹ ಹಕ್ಕಿಗಳ ಸಾಲು. ಹೊಸದಾಗಿ ಹಾಸಿದ ಡಾಂಬರು ರಸ್ತೆಯಲ್ಲಿ ಕಾಣ ಸಿಗುವ ಕೊಡೆ ಹಿಡಿದು ನಡೆದಿರೋ ಶಾಲೆ ಮಕ್ಕಳು. ಅಲ್ಲಲ್ಲಿ ನಿಂತು ಕೊಡೆ ಸರಿಸಿ ಇದ್ದರು ಇಲ್ಲದಂತಿರೋ ಸಣ್ಣ ಗುಂಡಿಯಲ್ಲಿ ಹೆಣಬಾರದ ಬ್ಯಾಗಿನ ಸಮೇತ ಥಟನೆ ನೀರಿಗೆ ಹಾರುವ ಆ ಮಕ್ಕಳ ಹುಮ್ಮಸ್ಸು.ದೂರದಲ್ಲಿ ನಿಂತ ತನ್ನ ಅಮ್ಮನ ನೋಡಿ, ಕೊಡೆ ಹಿಡಿದೇ ಓಡಿದ ಆ ಮಗು. ಎಲ್ಲಿ ಓಡಿ ಬರುವಾಗ ಜಾರಿ ಬೀಳುತ್ತಾನೇನೋ ನನ್ನ ಮಗ ಎಂದು ಹೆದರಿ "ಏಯ್ , ಅಲ್ಲೇ ನಿಲ್ಲೋ ಪುಟ್ಟ" ಅನ್ನೋ ಕೂಗಲಿ ಕಾಣ ಸಿಗುವ ನಿಸ್ವಾರ್ಥ ಪ್ರೀತಿ, ನನ್ನ ಬಾಲ್ಯದ ನೆನಪನ್ನು ಒಮ್ಮೆ ತಟ್ಟಿ ಎಬ್ಬಿಸಿತು.

ನನ್ನ ಬಾಲ್ಯವು ಹೀಗೆ, ಅಂದದ ಚೆಂದದ ತನ್ನದೇ ಆದ ಒಂದು ಪುಟ್ಟ ಪ್ರಪಂಚದಲ್ಲಿ ಯಾವುದೇ ಆಡಂಬರವಿಲ್ಲದೆ ಸಾಗಿತ್ತು. ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ ಹಾಗು ಒಬ್ಬಳು ಪುಟ್ಟ ತಂಗಿ. ಕಣ್ಣು ಆಸೆಪಟ್ಟಿದೆಲ್ಲಾ ತೆಗೆದು ಕೊಡುವಷ್ಟು ಅನಕೂಲವಂತ ಸಂಸಾರವಲ್ಲದಿದ್ದರು, ಮನೆ ತುಂಬಾ ಪ್ರೀತಿಗೆ ಹಾಗು ಊಟಕ್ಕೆ ಯಾವುದೇ ಅಡೆ-ತಡೆ ಇರಲಿಲ್ಲ. ಮನೆ ಸಣ್ಣದಿದ್ದರು, ಮನೆಗೆ ಬಂದವರನ್ನು ಉಳಿಸಿಕೊಂಡು ಸತ್ಕರಿಸಿ ಖುಷಿಯಿಂದ ಸಾಗಿಸೋ ಒಲವು, ಜವಾಬ್ದಾರಿ ಹಾಗು ಪ್ರೌಢತೆಯ ಪಾಠ ಜೊತೆಯಲ್ಲೇ ಸಾಗಿತ್ತು. ಅನ್ನಿಸಿದ್ದು ಆಡುವ, ಸಮಯದ ಬಗ್ಗೆ ಕಾಳಜಿ ಬಿಟ್ಟು ಗೆಳೆಯರ ಜೊತೆ ಹರಟುವ ಸ್ವಾತಂತ್ರಕ್ಕೆ ಎಂದು ಕೊರತೆ ಇರಲಿಲ್ಲ. ಈ ನೆನಪಿನ ಹೊಳೆಯಲ್ಲಾ ಕ್ಷಣ ಮಾತ್ರದಲ್ಲಿ ಹರಿದುಹೋಯಿತು, ಕೈಯಲ್ಲಿದ್ದ ಚಹಾದ ಲೋಟ ನನ್ನ ಬೆರಳಿಗೆ ಬಿಸಿಮುಟ್ಟಿಸು ವರ್ತಮಾನಕ್ಕೆ ಕರೆತಂದಿತ್ತು.

ಇಷ್ಟೆಲ್ಲಾ ಆಗೋದ್ರಲ್ಲಿ, ಮಳೆ ತನ್ನ ದಿನದ ಸರದಿ ಮುಗಿಸಿ, ಸಂಜೆಯ ಸೂರ್ಯನ ಕಿರಣಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಕೆಂಪಾದ ಸೂರ್ಯನ ನೋಡೋದೇ ಒಂದು ಸೊಗಸು. ಹೀಗೆ ನೋಡುವಾಗ, ಅದೇಕೋ ಮನಸ್ಸು ಹೊಸ ಡಾಂಬರು ರಸ್ತೆಯ ನೋಡು ಅಂತ ಕೂಗಿ ಕೂಗಿ ಹೇಳಿತ್ತು. ನಾನು ಮನಸ್ಸಿನ ಭಾವಕ್ಕೆ ಕಟುಬಿದ್ದು ನೋಡಿದೆ, ದೂರದಲ್ಲಿ ಯಾರೋ ನಡೆದು ಬಂದಂತೆ ಅನಿಸಿತ್ತಾದ್ರು, ಯಾರೆಂದು ಲಕ್ಷ್ಯ ಕೊಟ್ಟು ನೋಡುವ ಶಕ್ತಿ ಕಣ್ಣಿಗಾಗಲಿ ದೇಹಕ್ಕಾಗಲಿ ಇರಲಿಲ್ಲ. ಆದರೂ, ಒಳ ಮನಸ್ಸಿನ ಒತ್ತಡ ನನ್ನ ಒಳ ಹೋಗಲು ಬಿಡಲಿಲ್ಲ. ನಾನು ಕಾದೆ, ಒಂದೊಳ್ಳೆ ನಾಟಕವ ನೋಡಲು ಹೋದಾಗ, ಪರದೆಸರಿಸುವಾಗ ಬರುವ ಕಾತುರತೆಯ ಭಾವ ಸಣ್ಣಗೆ ಮೂಡಿತ್ತು.

ಆ ಕಾತರತೆಗೆ ತಕ್ಕಂತೆ , ನಡೆದು ಬರುತಿದ್ದ ವ್ಯಕ್ತಿ ಹೆಣ್ಣು ಅಂತ ಗೊತ್ತಾದಾಗ, ಹುಡುಗ ಮನಸ್ಸಿನ ಸಹಜ ತುಡಿತ, ಕಣ್ಣಿನ್ನ ನಿಶ್ಯಕ್ತಿಗೆ ಮಡಿಲು ತುಂಬಿ ಗ್ಲುಕೋಸ್ ಕೊಟ್ಟಿತ್ತು. ಅಂತಹ ಆಕರ್ಷಕ ಮೈಕಟ್ಟು ಅಲ್ಲದಿದ್ದರೂ, ಒಮ್ಮೆಗೆ ಜರಿದುಬಿಡುವಂತ ಅವಶ್ಯಕತೆಗೆ ಜಾಗ ಇರಲಿಲ್ಲ. ನಡಿಗೆಯಲ್ಲಿ ಹಂಸದ ನಡಿಗೆಗೆ ಹೋಲುವ ಯಾವುದೇ ಹಾವ-ಭಾವ ಇಲ್ಲದಿದ್ದರೂ, ತನ್ನದೇ ಆದ ಒಂದು ಛಾಪು ಮೂಡಿಸುವ ಗುಣ ಇತ್ತು. ಒಂದು ಹೆಣ್ಣಿಗೆ ನಾಚಿಕೆ ಎಂಬುದು ಚಂದದ ಆಭರಣ ಅಂತ ಕೇಳಿದ್ದೆ ಆದರೆ ಅದರ ಅನುಭವ ಆಗಿದ್ದು ಅಂದೇ. ಮುಂಗುರಳನ್ನು ಸರಿಸಿ, ಕೆಂಪಾದ ಸೂರ್ಯನ ಕಿರಣಗಳಿಗೆ ತನ್ನ ಮುಖಕ್ಕೆ ದಾರಿ ಮಾಡಿದಾಗ, ಸಣ್ಣಗೆ ಮಳೆಹನಿಯ ಸಪ್ಪಳ ಮನದೊಳಗೆ ಮೂಡಿತು. ಅದೇಕೋ ಬಾಲ್ಕನಿ ಅಲ್ಲಿ ನಿಂತಿದ್ದಿದರು, ಮುರುಕಲು ಕುರ್ಚಿ ಸಿಂಹಾಸನದಂತೆ ಹಾಗು ನಾನು ಸ್ವರ್ಗ ದಲ್ಲಿ ಇದ್ದಂತೆ ಭಾಸ ವಾಯಿತು. ಆ ಹುಡುಗಿಯ ಮೊಗದಂಚಿನಲ್ಲಿ ಮೂಡಿದ ಸಣ್ಣ ಹೊಳಪು, ಸೂರ್ಯನು ನೀಡಿದ ದೃಷ್ಟಿ ಬೊಟ್ಟಂತೆ ಗೋಚರಿಸಿಟ್ಟಿದ್ದರು, ನನ್ನ ದೃಷ್ಟಿಗೇನು ಕೊರತೆ ಇರಲಿಲ್ಲ.
- ಒಲವಿನ ಕಥೆಯೊಂದಿಗೆ ಮತ್ತೆ ಸಿಗೋಣ!