ಬೆಲ್ಜಿಯಂ ಕಲಾ ವೇದಿಕೆ ಇಂದಿಗೆ ತನ್ನ ಮೊದಲ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದೆ. ಇಡೀ ವರ್ಷದ ಪಯಣವನ್ನ ತಕ್ಕ ಮಟ್ಟಿಗೆ ಹತ್ತಿರದಿಂದ ನೋಡಿರುವದರಿಂದ ಸಹಜವಾಗಿಯೇ ಬೆಲ್ಜಿಯಂ ಕಲಾ ವೇದಿಕೆ ಅನ್ನೋ ಹೆಸರು ಗೊತ್ತಿಲ್ಲದೇ ನಲ್ಮೆಯ, ಹೆಮ್ಮೆಯ , ಸ್ನೇಹದ ಭಾವವನ್ನು ಮೂಡಿಸುತ್ತದೆ.
ಆ ಸಂಭ್ರಮದ ನೆನಪಿಗೆ ನನ್ನ ಸಣ್ಣ ಟಿಪ್ಪಣಿ, ಮನಸ್ಸಿನಿಂದ.
ನಮ್ಮ ದೇಶ, ಭಾಷೆ, ಜನ, ಕಲೆ, ಕಲಾವಿದರು, ಊಟ, ಪ್ರೀತಿ, ಸ್ನೇಹ, ಭಾವ, ಬದುಕು ಎಲ್ಲಾ ಬಿಟ್ಟು ಏನೋ ಒಂದು ಹುಚ್ಚು ಆಸೆ, ಹುಮ್ಮಸ್ಸು, ಕನಸಿಗಾಗಿ ಸುಮಾರು ಏಳು-ಎಂಟು ಸಾವಿರ ಕಿಮಿ ದೂರ ಬೆಲ್ಜಿಯಂ ಅನ್ನೋ ದೇಶಕ್ಕೆ ಬಂದಾಗ, ಮೊದಲ 5 - 6 ವರ್ಷ ಇಲ್ಲಿನ ಜನರ ಭಾಷೆ, ನಡೆ-ನುಡಿ, ಸ್ನೇಹ, ಒಡನಾಟ, ಕೆಲಸ, ಮನೆ, ಮಕ್ಕಳು ಅನ್ನೋ ವಿಷಯದಲ್ಲೇ ಕರಗಿ ಹೋಗಿತ್ತು.
ಅಲ್ಲಿಗೆ, ನಾವು ಏನೇ ಪ್ರಯತ್ನ ಪಟ್ಟರು ಎಲ್ಲೋ ಒಂದು ರೀತಿಲಿ, ಈ ದೇಶದ ಜನರಿಗೆ ನಾವು ಯಾವಾಗಲು ಹೊರಗಿನವರೇ ಅನ್ನೋ ಕೂಗು ಇಮ್ಮಡಿಯಾಗುತ್ತಲೇ ಇತ್ತು. ನಮ್ಮ ಜನ, ಭಾಷೆ, ಸಂಸ್ಕೃತಿ, ಹಬ್ಬ, ಕಲೆ, ಸಂಗೀತ, ಹಬ್ಬದ ಅಡಿಗೆ, ಕೂಡಿ ಕನ್ನಡಲ್ಲಿ ಹರಟೆ ಹೊಡೆಯೋ ಗುಂಪಿಗಾಗಿ ಹಾತೊರೆಯುತ್ತಲೇ ಇತ್ತು. ಅಂತಹ ವಿಚಲಿತ , ಹತಾಶ ಮನೋಭಾವದಲ್ಲಿದಾಗ ನನ್ನ ಸ್ನೇಹಿತರ ಮೂಲಕ ಪರಿಚಯವಾಗಿದ್ದು ಡಾ. ನವೀನ ಶೆಟ್ಟಿ ಹಾಗು ಅವರ ಕನ್ನಡ, ಕಲೆ, ಸಂಸ್ಕೃತಿ, ಪರಂಪರೆ ಬಗೆಗಿನ ಒಲವು-ಪ್ರೀತಿ.
ಒಂದು ಊರಿಂದ - ಇನ್ನೊಂದು ಊರಿಗೆ ಬಂದಾಗ್ಲೇ, ನಮ್ಮೋರು ಅಂತ ಸಿಗೋದು ಕಷ್ಟವಿರುವಾಗ, ದೇಶ ಬಿಟ್ಟು ಬೇರೆ ದೇಶಕ್ಕೆ ಬಂದು, ಎಲ್ಲಾ ಕನ್ನಡಿಗರನ್ನು ಸೇರಿಸಿ, ನಮ್ಮ ನಾಡ ಸಂಸ್ಕೃತಿ - ಪರಂಪರೆ , ಭಾಷೆ , ಹಬ್ಬ, ಕಲೆಯನ್ನು ಆಚರಿಸುವ ಕಾರ್ಯಕ್ಕೆ ಕೈ ಹಾಕುವುದು ಸಾಮಾನ್ಯದ ಮಾತಲ್ಲ. ನನ್ನ ಪ್ರಕಾರ ಅದೊಂತರ ಭಗೀರಥ ಪ್ರಯತ್ನ.
ಆ ಪ್ರಯತ್ನದಲ್ಲಿ ಈಗ ನನ್ನ ಗೆಳೆಯರಾಗಿರುವ ಡಾ. ನವೀನ್ ಹಾಗು ಅವರ ಧರ್ಮಪತ್ನಿ ರಶ್ಮಿ, ಬೆಲ್ಜಿಯಂ ಕಲಾ ವೇದಿಕೆ ಮೂಲಕ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಒಂದು ವರ್ಷದ ಪಯಣದಲ್ಲಿ ಅನೇಕ ಮನ ಮುಟ್ಟುವ, ಹುಬ್ಬೇರಿಸುವ, ಬೇರೆಯವರಿಗೆ ದಾರಿ ದೀಪವಾಗುವ, ಮೂಗು ಮುರಿಯುವರ ಮೂಗಿನ ಮೇಲೆ ಬೊಟ್ಟು ಇಟ್ಟುಕೂರುವ ರೀತಿಯಲ್ಲಿ ತಡವಿರದೆ ಸ್ವ ಪ್ರೇರಣೆಯಿಂದ ಯಶಸ್ವಿಯಾಗಿದ್ದಾರೆ.
ಆ ಯಶಸ್ಸಲ್ಲಿ ಅನೇಕರ ಪಾತ್ರವಿದೆ, ಒಳ್ಳೆಯವರ ಆಶೀರ್ವಾದವಿದೆ, ದೊಡ್ಡವರ ಮಾರ್ಗದರ್ಶನವಿದೆ , ಸ್ನೇಹಿತರ ಸಹಕಾರವಿದೆ, ಕಲಾವಿದರ ಕೃತಿಯಿದೆ , ಕನ್ನಡಿಗರ ಬೆಂಬಲ ಹಾಗೂ ಹಿತ ಶತ್ರುಗಳ ಪ್ರೇರಣೆಯಂತೂ ಖಂಡಿತ ಇದೆ.
ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ , ನಮ್ಮ ಜನರ ಬಗೆಗಿನ ಹುಚ್ಚು ಆಸೆ, ಪ್ರೀತಿ, ಹುಮ್ಮಸ್ಸು, ಒಲವು ಇಟ್ಟುಕೊಂಡು,ಬೆಲ್ಜಿಯಂ ಕಲಾ ವೇದಿಕೆ ಅನ್ನೋ ಬೃಹತ್ ಸ್ನೇಹಿತರ-ಸ್ನೇಹದ, ಗೌರವ-ಗಾಂಭೀರ್ಯದಿಂದ ಕೂಡಿದ, ಪರಿಚಯ-ಪ್ರೋತ್ಸಾಹದಿಂದ ತುಂಬಿರುವ, ಬಳಗದ ರೂವಾರಿಗಳಾದ ನವೀನ್ ಹಾಗು ರಶ್ಮಿಯವರಿಗೆ ಈ ಶ್ರೇಯ ನ್ಯಾಯಸಮ್ಮತವಾದದ್ದು ಅನಿಸುತ್ತದೆ.
ನಮ್ಮಂತೆಯೇ ಅವರು ಕೂಡ ಕೆಲಸ, ಮನೆ, ಮಗು, ಪ್ರಮೋಷನ್ , ಹೈಕ್, ಟ್ರಿಪ್ಸ್, ಸೇವಿಂಗ್ಸ್ ಅಂತಾ ಸುಮ್ನೆ ಕೂರ ಬಹುದಿತ್ತು. ಆಗ ಅವರಿಗೆ ನಿಷ್ಕಲ್ಮಶ ಪ್ರಯತ್ನಕ್ಕೆ ನೋವು, ಸಂಕಟ ಅನುಭವಿಸುವ ಅಗತ್ಯ ಇರಲಿಲ್ಲ. ಇರಲಿ ಗೆದ್ದೆತ್ತಿನ ಬಾಲ ಹಿಡಿಯೋ ಜನರು ಎಲ್ಲಾ ಕಡೆ ಇರುತ್ತಾರೆ.
Anyways , ಹೇಳೋಕೆ ತುಂಬಾ ಇದೆ, ಆದರೆ ಇನ್ನೊಂದಿನ ಹೇಳೋಣ, ಈಗ, ವರ್ಷದ ಪಯಣ ಮುಗಿಸಿರುವ ಬೆಲ್ಜಿಯಂ ಕಲಾ ವೇದಿಕೆ , ತನ್ನದೇ ಆದ ವಿಭಿನ್ನ, ವಿಶಿಷ್ಟ, ಕಾರ್ಯಕ್ರಮಗಳನ್ನು ಇನ್ನಷ್ಟು ಮತ್ತಷ್ಟು ಮಾಡಲಿ, ನೂರಾರು ವರುಷ ನಮ್ಮ ನಾಡು- ನುಡಿ, ಭಾಷೆ-ಭಾವ, ಸಂಸ್ಕೃತಿ ಪರಂಪರೆಯ ಪರಿಮಳವನ್ನು ಹೀಗೆ ಪಸರಿಸುತ್ತಾ ಸಾಗಲಿ ಅಂತ ಆಶಯಿಸೋ....
- ಕನ್ನಡಿಗ
No comments:
Post a Comment