Saturday, November 3, 2018

ಅಲೆಮಾರಿ!

ಸರಿ ಸುಮಾರು ಒಂದು ವರುಷದ ನಂತರ, ಮತ್ತೊಮ್ಮೆ ಮನದಾಳದ ಮಾತನ್ನು ಕೃತಿ ರೂಪದಲ್ಲಿ ಇಡುವ ಆಸೆ.

ಬಿಡುವಿಲ್ಲದ ಬದುಕಲ್ಲಿ ಮನಸಿಟ್ಟು ಬರೆಯಲು ಸ್ವಲ್ಪ ಸಮಯ ಸಿಕ್ಕಿತೆಂಬ ಖುಷಿ ಒಂದೆಡೆ ಆದರೆ, ಬರೆಯಬೇಕಂಬ ವಿಷಯಗಳ ಸಾಲಲ್ಲಿ ನಾ ಮುಂದು ತಾ ಮುಂದು ಎಂದು ಮನಸ್ಸಿನ ಕದ ತಟ್ಟುತ್ತಿರುವ ವಿಚಾರಗಳು ಹಲವಾರು.

ಕಳೆದ ಒಂದು ವರುಷದಲ್ಲಿ ನಡೆದ ಸಂಗತಿಗಳು, ಆದ ಸಿಹಿ-ಕಹಿ ಬದಲಾವಣೆಗಳು , ಎದೆ ತುಂಬಿ ಬಂದ ಸನ್ನಿವೇಶಗಳು, ಗೆದ್ದ ಯುದ್ಧಗಳು, ಸೋಲಿನಿಂದ ಕಲಿತ ಪಾಠಗಳು, ಚಿಗುರೊಡೆಯುವ ಮುನ್ನವೇ ಕರಗಿದ ಕನಸುಗಳು ನೂರೆಂಟು. ಆದದ್ದೆಲ್ಲ ಪಕ್ಕಕ್ಕಿಟ್ಟು, ಬದುಕೆಂಬ ಮುಗಿಯದ ಪಯಣಕ್ಕೆ, ವೈಚಾರಿಕ ತಳಹದಿ ಹಾಕಿ ನೋಡಿದಾಗ ಅನಿಸಿದ್ದು, ನಾನು ಅಲೆಮಾರಿ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಹಾಡಿನ ಸಾಲು ಅಕ್ಷರಃ ಸಹ ಸರಿಯೆನ್ನಿಸತೊಡಗಿದೆ. ಬದುಕು-ಬಯಕೆಗಳ ನಡುವೆ ದಿನನಿತ್ಯ ನಡೆಯುವ ನಿಲ್ಲದ ಚರ್ಚೆಗೆ ತರ್ಕಬದ್ದ ಉತ್ತರ ಹುಡುಕುವ ತವಕ ಬೆಟ್ಟದಷ್ಟು.

ಸರಿ-ತಪ್ಪು, ಖುಷಿ-ದುಃಖ, ಸೋಲು-ಗೆಲುವು, ಒಲವು-ವಿರಹಗಳ ನಡುವೆ ಹೆಜ್ಜೆಹೆಜ್ಜೆಗೂ ಲೆಕ್ಕ ಹಾಕಿ, ಬೆಳೆಕು ಕಂಡೆಡೆ ಸಾಗಿ, ನಾಳೆಯಂಬ ಕನಸ್ಸಿನ ಗಾಳಿ ಗೋಪುರಕ್ಕೆ ಹಾತೊರೆದು ಬಾಳುವ ಬದುಕು, ಅಲೆಮಾರಿ ಬದುಕಲ್ಲವೇ ಎಂಬ ಪ್ರಶ್ನೆ ಮನೆ ಮಾಡಿ ಕೂತಿದೆ.

ಮನೆಯಂಗಳದಿಂದ ಶುರುವಾದ ಬಾಲ್ಯ ಕಳೆದು, ಶಾಲೆ ಮೆಟ್ಟಿಲೇರಿ, ಕಾಲೇಜಿನ ಡಿಗ್ರಿ ಪಡೆದು, ಸಿಕ್ಕ ಮೊದಲ ಸಂಬಳದಿಂದ ಶುರುವಾದ ಈ ಅಲೆಮಾರಿ ಬದುಕು ತಂದೆ-ತಾಯಿಯ ತ್ಯಾಗ, ಪ್ರೀತಿಯ ಆಸರೆಯ ಜೊತೆ ಜೊತೆಗೆ ಸಾಗಿ ತನ್ನದೇ ಕಾಣದ ಕಡಲಿನ ಕಡೆ ಮೈಯೊಡ್ಡಿ ನಿಂತಿರುತ್ತದೆ. ನಂತರ ಸಾಗುವ ಪಯಣಕೆ, ಅಲ್ಲಿ ತನಕ ಕಲೆತ ಪಾಠಗಳೇ ಆಸರೆ.

ನಾಳೆಯ ಅರಿವಿಲ್ಲದೆ, ಕಂಡದ್ದೆಲ್ಲ ಬೇಕೆಂಬ ಆಸೆಗೆ ಲಗಾಮು ಹಾಕಿ, ಸಿಗದ ಮೊದಲ ಪ್ರೀತಿಯನ್ನು ಹರಿಸಿ ಬೀಳ್ಕೊಟ್ಟು, ನನಸಾಗದ ಕನಸುಗಳಿಗೆ ಗೂಡು ಕಟ್ಟಿ ಬಚ್ಚಿಟ್ಟು, ಹೊರನಡೆದ ಜೀವಗಳ ನೆನೆಯುತ್ತ, ಇರುವ ಗೆಳೆತನ ಸವೆಯುತ್ತಾ, ಬೆಳಕು ಕಂಡೆಡೆ ಹಾರುವ ಈಚಲು ಹುಳದ ಹಾಗೆ, ಅಲೆಮಾರಿ ಜೀವನ ದೂರದ ಬೆಳಕ ಆರಿಸಿ ನಡೆದು ಬಂದು ಬಿಡುತ್ತದೆ.

ಈ ಅಲೆಮಾರಿ ಬದುಕಿಗೆ, ಬೆಳಕು ಕಾಣದಿದ್ದಾಗ ಆಗುವ ತಳಮಳಕ್ಕೆ, ಕಟ್ಟಿದ್ದ ಗಾಳಿ ಗೋಪುರ ನೆಲಸಮವಾದಾಗ ಬೇಕಾದ ಸಾಂತ್ವನಕ್ಕೆ ಸಿಕ್ಕ ಉತ್ತರವೇ, ನನ್ನ ಮುದ್ದಾದ ಮಡದಿ. ಆಕೆಯಿಂದ ಸಿಗುವ ನಿಷ್ಕಲ್ಮಶ ಒಲವು, ನಂಬಿಕೆ, ಸ್ಪೂರ್ತಿ, ಬದುಕಿನೆಡೆಗೆ ಇರುವ ಆಸೆಯನ್ನು ಇಮ್ಮಡಿಗೊಳಿಸಿ ಇನ್ನಷ್ಷ್ಟು ಮತ್ತಷ್ಟು ಆಕೆಯನ್ನು ಜೋಪಾನಮಾಡುವ, ಜೊತೆ-ಜೊತೆಗೆ ಕಾಣದ ಬೆಳಕನ್ನು ಹುಡುಕಿ, ಮತ್ತೊಂದು ಗಾಳಿ ಗೋಪುರ ಕಟ್ಟುವ ವಿಶ್ವಾಸ. ಈ ಅಲೆಮಾರಿ ಬದುಕಿಗೆ ಆಕೆಯೇ ನಲ್ಮೆಯ ಒಡನಾಡಿ.

ಹುಟ್ಟು-ಸಾವು, ನೋವು-ನಲಿವು, ಸುಖ-ದುಃಖಗಳಿಗೆ ಅಂಟಿಕೊಳ್ಳದೆ, ನಿರಂತರ ಪಯಣಕ್ಕೆ ಸೋತು, ಮನಮುಟ್ಟಿದ ಆಸರೆಯೊಂದಿಗೆ ಕಾಣದ ಕಡಲಿನೆಡೆಯೋ  ಅಥವಾ ದೂರದ ಬೆಳಕಿನೆಡೆಗೂ ಸಾಗುವ ಈ ಅಲೆಮಾರಿ ಬದುಕಿಗೊಂದು ಸಲಾಂ.

ಒಲವಿನ ಆಸರೆಯೊಡನೆ, ದೂರದ ಬೆಳಕಿನಡೆ ಸಾಗಿ,ಗಾಳಿ ಗೋಪುರ ಕಟ್ಟಿ ಹೆಸರಿಡುವ ಸಮಯ! ;-)

ಮತ್ತೆ ಸಿಗುವ!

2 comments: