Sunday, September 4, 2016

ನೆನಪಿನ ದಾರಿಯಲ್ಲಿ, ನಾನು - ಭಾಗ 1

ನಾವು ಸಾಗೊ ಎಷ್ಟೋ ದಾರಿಯಲ್ಲಿ, ನಮಗೆ ಅರಿವಿಲ್ಲದಂತೆ ಆಗೋ ನೂರೆಂಟು ಪರಿಚಯಗಳಲ್ಲಿ ಮೆತ್ತಗೆ ನೆನಪಿನೆ ಹಾಳೆಯನ್ನು ಆವರಿಸಿಕೊಳ್ಳೋ ಒಂದು ಮೊಗವನ್ನರಿಸಿ ಬರೆಯೋಣ ಅಂತ ಕೂತಿದ್ದೇನೆ. ಈ ಪಾತ್ರವು, ಕಾಲ್ಪನಿಕ ಕಥಾ ಹಂದರ ಎಂಬ ಸಾಗರದಲ್ಲಿ ಸಾಗುವ ಒಂದು ಪುಟ್ಟ ದೋಣಿ ಅಷ್ಟೇ, ನನ್ನ ನಿಜ ಜೀವನದ ಪಯಣದಲ್ಲಿ ಸಿಕ್ಕ ಜೀವ ಅಲ್ಲ.

ಮೇಲಿನ ಪುಟ್ಟ ಮುನ್ನುಡಿಯನ್ನು ಎತ್ತಿಟ್ಟು ಮುಂದೆ ನಡೆಯೋಣವೇ?

ಮುಂಗಾರು ಮಳೆಯಲ್ಲಿ ಎಂತ ದುಃಖತಪ್ತ ಜೀವಕ್ಕೂ ಒಂದು ಗೆಲುವಿನ ಹುಮ್ಮಸ್ಸು ಕೊಡೊ ಶಕ್ತಿ ಇರುತ್ತೆ ಅಂತ ಕೇಳಿದ್ದೆ. ಅಂತಹ, ಘಮ ಘಮಿಸುವ ಮಂಗಳೂರಿನ ಮುಂಗಾರು ಮಳೆಯ ಸಂಜೆಯಲ್ಲಿ, ದಣಿದ ದೇಹಕ್ಕೆ ಬಿಸಿ ಚಹಾದ ಸಾಂತ್ವನ ಕೊಟ್ಟು, ಮುರುಕಲು ಕುರ್ಚಿಯ ತುದಿಯಲ್ಲಿ ಕೂತು ಹಾಗೆ ನನ್ನ ಸುತ್ತಲಿನ ಪ್ರಪಂಚವ ಆನಂದಿಸೋ ಆಸೆ ಆಯಿತು. ಕಣ್ಣುಹಾಯಿಸೋ ಕಡೆಯೆಲ್ಲೆಲ್ಲ ಹಚ್ಚ ಹಸಿರ ಅಂಗಿ ತೊಟ್ಟು , ಮುಂಗಾರಿನ ಸ್ಪರ್ಶಕ್ಕೆ ಮನದೊಳಗೆ ನಸು ನಗುತ್ತ ನಿಂತ ನೂರೆಂಟು ಗಿಡ-ಮರಗಳು. ಕಾರ್ಮೋಡ  ಹಾಗು ತಂಗಾಳಿಯ ನಡುವಲ್ಲಿ ಗೂಡು ಸೇರೋ ತವಕದಲ್ಲಿ ಹಾಡುತ್ತ ಸಾಗಿಹ ಹಕ್ಕಿಗಳ ಸಾಲು. ಹೊಸದಾಗಿ ಹಾಸಿದ ಡಾಂಬರು ರಸ್ತೆಯಲ್ಲಿ ಕಾಣ ಸಿಗುವ ಕೊಡೆ ಹಿಡಿದು ನಡೆದಿರೋ ಶಾಲೆ ಮಕ್ಕಳು. ಅಲ್ಲಲ್ಲಿ ನಿಂತು ಕೊಡೆ ಸರಿಸಿ ಇದ್ದರು ಇಲ್ಲದಂತಿರೋ ಸಣ್ಣ ಗುಂಡಿಯಲ್ಲಿ ಹೆಣಬಾರದ ಬ್ಯಾಗಿನ ಸಮೇತ ಥಟನೆ ನೀರಿಗೆ ಹಾರುವ ಆ ಮಕ್ಕಳ ಹುಮ್ಮಸ್ಸು.ದೂರದಲ್ಲಿ ನಿಂತ ತನ್ನ ಅಮ್ಮನ ನೋಡಿ, ಕೊಡೆ ಹಿಡಿದೇ ಓಡಿದ ಆ ಮಗು. ಎಲ್ಲಿ ಓಡಿ ಬರುವಾಗ ಜಾರಿ ಬೀಳುತ್ತಾನೇನೋ ನನ್ನ ಮಗ ಎಂದು ಹೆದರಿ "ಏಯ್ , ಅಲ್ಲೇ ನಿಲ್ಲೋ ಪುಟ್ಟ" ಅನ್ನೋ ಕೂಗಲಿ ಕಾಣ ಸಿಗುವ ನಿಸ್ವಾರ್ಥ ಪ್ರೀತಿ, ನನ್ನ ಬಾಲ್ಯದ ನೆನಪನ್ನು ಒಮ್ಮೆ ತಟ್ಟಿ ಎಬ್ಬಿಸಿತು.

ನನ್ನ ಬಾಲ್ಯವು ಹೀಗೆ, ಅಂದದ ಚೆಂದದ ತನ್ನದೇ ಆದ ಒಂದು ಪುಟ್ಟ ಪ್ರಪಂಚದಲ್ಲಿ ಯಾವುದೇ ಆಡಂಬರವಿಲ್ಲದೆ ಸಾಗಿತ್ತು. ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ ಹಾಗು ಒಬ್ಬಳು ಪುಟ್ಟ ತಂಗಿ. ಕಣ್ಣು ಆಸೆಪಟ್ಟಿದೆಲ್ಲಾ ತೆಗೆದು ಕೊಡುವಷ್ಟು ಅನಕೂಲವಂತ ಸಂಸಾರವಲ್ಲದಿದ್ದರು, ಮನೆ ತುಂಬಾ ಪ್ರೀತಿಗೆ ಹಾಗು ಊಟಕ್ಕೆ ಯಾವುದೇ ಅಡೆ-ತಡೆ ಇರಲಿಲ್ಲ. ಮನೆ ಸಣ್ಣದಿದ್ದರು, ಮನೆಗೆ ಬಂದವರನ್ನು ಉಳಿಸಿಕೊಂಡು ಸತ್ಕರಿಸಿ ಖುಷಿಯಿಂದ ಸಾಗಿಸೋ ಒಲವು, ಜವಾಬ್ದಾರಿ ಹಾಗು ಪ್ರೌಢತೆಯ ಪಾಠ ಜೊತೆಯಲ್ಲೇ ಸಾಗಿತ್ತು. ಅನ್ನಿಸಿದ್ದು ಆಡುವ, ಸಮಯದ ಬಗ್ಗೆ ಕಾಳಜಿ ಬಿಟ್ಟು ಗೆಳೆಯರ ಜೊತೆ ಹರಟುವ ಸ್ವಾತಂತ್ರಕ್ಕೆ ಎಂದು ಕೊರತೆ ಇರಲಿಲ್ಲ. ಈ ನೆನಪಿನ ಹೊಳೆಯಲ್ಲಾ ಕ್ಷಣ ಮಾತ್ರದಲ್ಲಿ ಹರಿದುಹೋಯಿತು, ಕೈಯಲ್ಲಿದ್ದ ಚಹಾದ ಲೋಟ ನನ್ನ ಬೆರಳಿಗೆ ಬಿಸಿಮುಟ್ಟಿಸು ವರ್ತಮಾನಕ್ಕೆ ಕರೆತಂದಿತ್ತು.

ಇಷ್ಟೆಲ್ಲಾ ಆಗೋದ್ರಲ್ಲಿ, ಮಳೆ ತನ್ನ ದಿನದ ಸರದಿ ಮುಗಿಸಿ, ಸಂಜೆಯ ಸೂರ್ಯನ ಕಿರಣಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಕೆಂಪಾದ ಸೂರ್ಯನ ನೋಡೋದೇ ಒಂದು ಸೊಗಸು. ಹೀಗೆ ನೋಡುವಾಗ, ಅದೇಕೋ ಮನಸ್ಸು ಹೊಸ ಡಾಂಬರು ರಸ್ತೆಯ ನೋಡು ಅಂತ ಕೂಗಿ ಕೂಗಿ ಹೇಳಿತ್ತು. ನಾನು ಮನಸ್ಸಿನ ಭಾವಕ್ಕೆ ಕಟುಬಿದ್ದು ನೋಡಿದೆ, ದೂರದಲ್ಲಿ ಯಾರೋ ನಡೆದು ಬಂದಂತೆ ಅನಿಸಿತ್ತಾದ್ರು, ಯಾರೆಂದು ಲಕ್ಷ್ಯ ಕೊಟ್ಟು ನೋಡುವ ಶಕ್ತಿ ಕಣ್ಣಿಗಾಗಲಿ ದೇಹಕ್ಕಾಗಲಿ ಇರಲಿಲ್ಲ. ಆದರೂ, ಒಳ ಮನಸ್ಸಿನ ಒತ್ತಡ ನನ್ನ ಒಳ ಹೋಗಲು ಬಿಡಲಿಲ್ಲ. ನಾನು ಕಾದೆ, ಒಂದೊಳ್ಳೆ ನಾಟಕವ ನೋಡಲು ಹೋದಾಗ, ಪರದೆಸರಿಸುವಾಗ ಬರುವ ಕಾತುರತೆಯ ಭಾವ ಸಣ್ಣಗೆ ಮೂಡಿತ್ತು.

ಆ ಕಾತರತೆಗೆ ತಕ್ಕಂತೆ , ನಡೆದು ಬರುತಿದ್ದ ವ್ಯಕ್ತಿ ಹೆಣ್ಣು ಅಂತ ಗೊತ್ತಾದಾಗ, ಹುಡುಗ ಮನಸ್ಸಿನ ಸಹಜ ತುಡಿತ, ಕಣ್ಣಿನ್ನ ನಿಶ್ಯಕ್ತಿಗೆ ಮಡಿಲು ತುಂಬಿ ಗ್ಲುಕೋಸ್ ಕೊಟ್ಟಿತ್ತು. ಅಂತಹ ಆಕರ್ಷಕ ಮೈಕಟ್ಟು ಅಲ್ಲದಿದ್ದರೂ, ಒಮ್ಮೆಗೆ ಜರಿದುಬಿಡುವಂತ ಅವಶ್ಯಕತೆಗೆ ಜಾಗ ಇರಲಿಲ್ಲ. ನಡಿಗೆಯಲ್ಲಿ ಹಂಸದ ನಡಿಗೆಗೆ ಹೋಲುವ ಯಾವುದೇ ಹಾವ-ಭಾವ ಇಲ್ಲದಿದ್ದರೂ, ತನ್ನದೇ ಆದ ಒಂದು ಛಾಪು ಮೂಡಿಸುವ ಗುಣ ಇತ್ತು. ಒಂದು ಹೆಣ್ಣಿಗೆ ನಾಚಿಕೆ ಎಂಬುದು ಚಂದದ ಆಭರಣ ಅಂತ ಕೇಳಿದ್ದೆ ಆದರೆ ಅದರ ಅನುಭವ ಆಗಿದ್ದು ಅಂದೇ. ಮುಂಗುರಳನ್ನು ಸರಿಸಿ, ಕೆಂಪಾದ ಸೂರ್ಯನ ಕಿರಣಗಳಿಗೆ ತನ್ನ ಮುಖಕ್ಕೆ ದಾರಿ ಮಾಡಿದಾಗ, ಸಣ್ಣಗೆ ಮಳೆಹನಿಯ ಸಪ್ಪಳ ಮನದೊಳಗೆ ಮೂಡಿತು. ಅದೇಕೋ ಬಾಲ್ಕನಿ ಅಲ್ಲಿ ನಿಂತಿದ್ದಿದರು, ಮುರುಕಲು ಕುರ್ಚಿ ಸಿಂಹಾಸನದಂತೆ ಹಾಗು ನಾನು ಸ್ವರ್ಗ ದಲ್ಲಿ ಇದ್ದಂತೆ ಭಾಸ ವಾಯಿತು. ಆ ಹುಡುಗಿಯ ಮೊಗದಂಚಿನಲ್ಲಿ ಮೂಡಿದ ಸಣ್ಣ ಹೊಳಪು, ಸೂರ್ಯನು ನೀಡಿದ ದೃಷ್ಟಿ ಬೊಟ್ಟಂತೆ ಗೋಚರಿಸಿಟ್ಟಿದ್ದರು, ನನ್ನ ದೃಷ್ಟಿಗೇನು ಕೊರತೆ ಇರಲಿಲ್ಲ.
- ಒಲವಿನ ಕಥೆಯೊಂದಿಗೆ ಮತ್ತೆ ಸಿಗೋಣ!

2 comments: