Monday, September 11, 2017

ನೆನಪಿನ ದೋಣಿಯಲ್ಲಿ ನಾನು - ಭಾಗ ೩

ಕಾಲ್ಪನಿಕ ಕಥಾ ಹಂದರದಲ್ಲಿ ಮೂಡೋ ಎಷ್ಟೋ ಪಾತ್ರಗಳಲ್ಲಿ, ಸಂಧರ್ಭಗಳಲ್ಲಿ, ನೆನಪುಗಳ ಸರಮಾಲೆಯಲ್ಲಿ, ಕಣ್ಣಂಚಿನ ಆಸೆಗಳಲ್ಲಿ, ಹೃದಯದ ಪ್ರತಿ ಬಡಿತದಲ್ಲಿ, ನಡೆವ ನೂರು ದಾರಿಗಳಲ್ಲಿ, ಕರಗೋ ಸಹಸ್ರ ಕ್ಷಣಗಳಲ್ಲಿ, ಮನಸ್ಸಿನ ಅರಿವಿಲ್ಲದಂತೆ, ಮನಸ್ಸಿನ ಮನೆಗೆ, ಮನದ ಅಂಗಳದಲ್ಲಿ ಮೂಡೋ ಅನಿಮಿಯಿತಾ ಬಣ್ಣಗಳನ್ನು ಬಳೆದು, ಈ ಅಷ್ಟು ಆಸೆಗಳನ್ನು ಪೂರೈಸುವಂತಹ ಜೀವಕ್ಕೆ ಹಾತೊರೆದು ತೆರೆದ ಬಾಗಿಲ ಬಳಿ ಕಾದು ಕೂತಿರುತ್ತೇವೆ.

ಆ ಆಸೆಗಳಿಗೆ, ನೆನಪುಗಳಿಗೆ, ಕರಗಿಹೋದ ಭಾವನೆಗಳಿಗೆ ಒಂದು ಮೂರ್ತಿ ರೂಪ ಕೊಟ್ಟು ಆ ಬಣ್ಣದ ಮನೆಯಲ್ಲಿ ಕೂಡಿಸಿ ಅಕ್ಷತೆ ಹಾಕುವ ಬಯಕೆ. ನಿಜ ಜೀವನದ ಅಂಗವಲ್ಲದಿದ್ದರು, ಕಲಾವಿದನ ಕಲ್ಪನೆಗೆ ಎಟುಕದ ಮುಗಿಲು ಇಲ್ಲವೇ ಇಲ್ಲ ಅನ್ನೋ ಸ್ಫೂರ್ತಿಯೇ ಈ ಬರಹದ ತಳಹದಿ.

ನಾವೆಲ್ಲರೂ ಬಾಳಿನ ವಿವಿಧ ಹಂತಗಳನ್ನು, ವಿವಿಧ ರೀತಿಯಲ್ಲಿ, ಬಗೆ ಬಗೆಯ ಅನುಭವಗಳಿಗೆ ಮೈಯೊಡ್ಡಿ, ಸಿಹಿ-ಕಹಿ, ನೋವು-ನಲಿವು, ಆಸೆ-ಆಕಾಂಕ್ಷೆಗಳನ್ನು, ನಮ್ಮದೇ ಶೈಲಿಯಲ್ಲಿ ಗಳಿಸಿ, ಸಿಗದೇ ಇದ್ದಾಗ ಇಲ್ಲದ ಮನಸಲ್ಲಿ ಬೀಳ್ಕೊಟ್ಟು, ಆ ನೆನಪಿನ ದಾರಿಯಲ್ಲಿ ಒಂದು ಗೂಡು ಕಟ್ಟಿ ಬಂದಿರುತ್ತೇವೆ.

ಆ ಎಲ್ಲ ಹಂತಗಳಲ್ಲಿ ತುಂಬಾ ಕ್ರಿಯಾತ್ಮಕವಾದ ೧೮-೨೬ ರ ವಯಸ್ಸೇ ನಮ್ಮನ್ನು ಕಡೆವರೆಗೂ ಎಡಬಿಡದೆ ಕಾಡೋ ನೆನಪುಗಳ, ಆಸೆಗಳ, ಭಾವನೆಗಳ ಒಡೆಯ. ಈ ವಯಸ್ಸು ಎಂತಹದೆಂದರೆ, ವಾಸ್ತವಿಕ ಪ್ರಪಂಚಕ್ಕೆ ರೆಕ್ಕೆ ಪುಕ್ಕ ಕೊಟ್ಟು, ಅರಿಯದ ಆಗಸದ ಉತ್ತುಂಗಕ್ಕೆ ಕರೆದೊಯ್ದು ಬಿಡುತ್ತದೆ.

ಇಂತಹ ಹಲವಾರು ಹಾರಾಟಗಳಲ್ಲಿ ಮೂಡಿದ ಒಂದು ಮೂರ್ತಿಯ ಬಗ್ಗೆ ಬರೆಯುವ ಬಯಕೆ. ತಾರುಣ್ಯದಲ್ಲಿ ಬರುವ ಯೋಚನೆಗಳಿಗೆ ವ್ಯವಿಧ್ಯತೆಯ ಕೊರತೆ ಇಲ್ಲದಿದ್ದರೂ, ಪ್ರಮುಖವಾಗಿ, ಒಂದು ಬಾಲೆಯ ನೆನಪು ತುಳುಕು ಹಾಕಿರುತ್ತೆ.

ಎಲ್ಲರು ಸಹ ತಮ್ಮದೇ ರೀತಿಯಲ್ಲಿ ಒಂದು ಹುಡುಗಿಯ ಬಗ್ಗೆ ಆದರದ, ಪ್ರೀತಿಯ, ಅಭಿಮಾನದ ಒಲವು ಬಚ್ಚಿಟ್ಟಿರುತ್ತಾರೆ. ಸಹಜವಾಗಿಯೇ ವಯಸ್ಸಿನ ಬಯಕೆಯೋ, ಪ್ರಕೃತಿಯ ಇಚ್ಛೆಯೋ ನಾನು ಕೂಡ ಒಂದು ಹುಡುಗಿಯ ಹಾವ-ಭಾವ, ನಡಿಗೆ, ನಗು, ಮಾತು, ಅಚ್ಚರಿಯ ಭಾವ, ಸಂಕೋಚದ ಸಲಿಗೆ, ವಾರೆ ನೋಟ, ತುಟಿಯಂಚಿನ ನಗೆ, ಕಾಡಿಗೆ, ಬೊಂಬೆಯಂತಹ ಮೊಗಕೆ ಮಾಡಿದ ಸಿಂಗಾರ, ವಾರ್ಷಿಕೋತ್ಸವಕ್ಕೆ ಉಟ್ಟ ಸೀರೆ, ಘಮ ಘಮಿಸುವ ಮಲ್ಲಿಗೆ ಹೂವು, ಕೆನ್ನೆ ಗುಳಿ ಬಳಿ ಸರಿದಾಡೋ ರೇಷ್ಮೆಯಂತಹ ಕೂದಲು, ಎಲ್ಲವು ಸೇರಿ ಮನಸ್ಸಿನ ತುಂಬೆಲ್ಲ ಭಾವನೆಗಳ ಉನ್ಮಾದಕ್ಕೆ ಭದ್ರವಾದ ಅಡಿಪಾಯ ಹಾಕಲು ಬಿಟ್ಟಿದ್ದೆ.

ಬಾಳ ಹಡಗಿನ ದಾರಿ ಸಮುದ್ರದ ಅಲೆಗಳಿಗೋ, ಅಥವಾ ಬೀಸುವ ಗಾಳಿಗೆ ತಲೆಬಾಗೋ, ದಾರಿ ಬದಲಿಸಿದಾಗ, ನಗು ನಗುತ್ತಲೇ ಸಾಗಿ ಬಿಡುತ್ತೇವೆ. ಆ ವಯಸ್ಸಿನ ಅಭಿಮಾನ ಒಲವೇ ಅಂತದ್ದು. ಮನಸ್ಸಲ್ಲಿ ತಮ್ಮದೇ ಛಾಪು ಮೂಡಿಸಿದವರ ಬಗ್ಗೆ ಆದರದ ಭಾವ ಒಳ್ಳೇದನ್ನೇ ಬಯಸುತ್ತ ಮುಂದೆ ಸಾಗುತ್ತದೆ.

ಈ ರೀತಿ, ಕಲ್ಪನೆಯ ಕದ ತಟ್ಟಿದ ಬೆಡಗಿ, ನಾ ಚಾಹ ಕುಡಿಯಲು ಕೂತಿದ್ದ ಮೇಜಿನ ಕೂಗಳತೆ ದೂರದಲ್ಲಿ ಕಂಡರೆ, ಆಗುವ ತಳಮಳ , ಮಾತಾಡಿಸಬಹುದು ಅನ್ನೋ ಖುಷಿ, ಗುರುತು ಹಿಡಿಯಲ್ವೇನೋ ಅನ್ನೋ ಅಳುಕು, ಬರಿ ಹೈ ಅಲ್ಲೇ ಸಂಭಾಷಣೆ ಮುಗಿದು ಹೋದರೆ ಹೇಗೆ ಅನ್ನೋ ಪ್ರಶ್ನೆಗಳ ಹೂಗುಚ್ಛದೊಂದಿಗೆ ಮಾತಾಡಲು ಮುಂದಾದೆ.

ಸರಿಯಾಗಿ ಒಬ್ಬರನ್ನು ಒಬ್ಬರು ನೋಡದೆ ಸುಮಾರು ೩-೪  ವರ್ಷಗಳಾಗಿರಬಹುದು, ಆದರೂ ಇಂದಿಗೂ ನಮ್ಮ ಹುಡುಗರ ಮನ ಕೆಡಸಿದೆ ಅಂದಕ್ಕೆ ಕೊರತೆ ಕಾಣಲಿಲ್ಲ. ಜೊತೆ ಓದಿದವರು ಆಡುವ ಉಭಯಖುಶಲೋಪರಿ ಮಾತಾಡುತ್ತ, ಶಾಲಾ ಕಾಲೇಜಿನ ಸ್ಮರನೀಯ ಕ್ಷಣಗಳನ್ನು ನೆನೆಯುತ್ತ, ಒಂದು ಸುತ್ತು ನಾಲ್ಕು ವರ್ಷದ ಇಂಜಿನಿಯರಿಂಗ್ ಹಾದಿಯಲ್ಲಿ ಸಾಗಿ ಬರುವಷ್ಟರಲ್ಲಿ, ನಾಲ್ಕು ಸಮೋಸ, ೨ ಕಪ್ ಚಹಾ ಆಗೋಗಿದ್ದೆ ಗೊತ್ತಾಗಿಲ್ಲ.

ಮಾತು ದುಪ್ಪಟ್ಟಾದರು, ಅಳುಕು ಅಂಜಿಕೆ ಇಲ್ಲದ ವ್ಯಕ್ತಿತ್ವ ಅನ್ನೋದು ಕಾಲೇಜು ಮೆಟ್ಟಿಲತ್ತಿದಾಗಲೇ ಗೊತ್ತಾಗಿತ್ತು. ಗುರಿ ಮುಟ್ಟುವತನಕ ಗಮನ ಸಡಿಲಿಸದ ಸ್ಥಿರತೆ. ಮಾತುಗಳ ಪ್ರೌಢತೆ, ವಿಷಯಗಳ ಬಗೆಗಿನ ಜ್ಞಾನ, ಜೀವನದ ಸರಿ ತಪ್ಪುಗಳನ್ನೂ ಬೊಟ್ಟು ಮಾಡಿ ತೋರುಸಿತ್ತಿದಾಗ ಆಕೆ ಬಗೆಗಿನ ಅಭಿಮಾನ ಇಮ್ಮಡಿಯಾದಂತೆ ಭಾಸವಾಯಿತು. ಅಂದದ ಮೊಗಕೆ, ಚಂದದ ಮನಸ್ಸು ಎಂಬ ಭಾವವು ಮೂಡಿತ್ತು. ಕೆಲಸದ ಒತ್ತಡ, ವೀಸಾ ಬರದೇ ಇರೋ irritation , ಎರಡಂಕಿ ದಾಟದ salary hike , ಎಲ್ಲವು ಸಹ ಆಕೆಯ ಮಾತಿನ ಸೊಗಸಿನ ಮುಂದೆ ಸೋತು ಸುಣ್ಣವಾಗಿದ್ದವು.

ಮತ್ತೆ ಸಿಗೋಣ್ವಾ ಮೊಬೈಲ್ number  ಕೇಳ್ಬೇಕು ಅನ್ನೋ ಅಷ್ಟ್ರಲ್ಲಿ, ಆಕೆಯ fiance ಬಂದು ಕೈ ಕುಲಿಕಿದಾಗ ಚಿಗುರೊಡೆಯುತ್ತಿದ್ದ ಆಸೆ ಗೋಪುರ ಮೆಲ್ಲನೆ ತತ್ತರಿಸಿತು. ಕಷ್ಟದ ಮುಗುಳ್ನಗೆಯೊಂದಿಗೆ ಇಬ್ಬರನ್ನು ಬೀಳ್ಕೊಟ್ಟು, ನೆನಪಿನ ಹಾದಿಯಲ್ಲಿ ನೆಡೆದು ಬಂದೆ.
 
ಆ ಒಲವು, ಆದರ, ಅಭಿಮಾನ, ಮೆಲ್ಲನೆ ಒಳ್ಳೆ ಸ್ನೇಹಕ್ಕೆ ತಿರುಗಿ ಒಂದು ಅವಿನಾಭಾವ ಸಂಭಂದವಾಗಿ ಬೆಳೆದು, ಆಗಾಗ ಆಸರೆಯಾಗೋ ಗೆಳೆತಿಯಾಗಿ ಉಳಿದು ಬಿಡುವಂತಾದರೆ ಸಾಕು ಅನ್ನೋ ಭಾವವಿದ್ದರೂ, ಬಾಳಿನ ಹೊಸ ಅಧ್ಯಾಯ ಶುರು ಮಾಡುತ್ತಿರೋ ಹುಡುಗಿಗೆ ಮೆಲ್ಲನೆ ಮನ್ಸಲ್ಲೇ ಹಾರೈಸಿ ನಡೆದು ಬಂದೆ.

Saturday, January 14, 2017

ನೆನಪಿನ ದೋಣಿಯಲ್ಲಿ ನಾನು - ಭಾಗ ೨

ಸರ ಸರನೆ ಓಡಿಬಂದು, ಹತ್ತಿದ್ದ ಸಿಟಿ ಬಸ್ಸಲ್ಲಿ ಕೂತು, ಕಿವಿಗೆ ಸಣ್ಣನೆ ಕಿವಿಯಡಕ ಸಿಕ್ಕಿಸಿ, ನನ್ನದೇ ಲೋಕಕ್ಕೆ ಹೊಯ್ಯುವ ಹಾಡು ಕೇಳ ಕೂತೆ. ನಾನು ಯಾವಾಗಲೂ ಹಾಗೆ, ಓಡುವ ಬಸ್ಸಲ್ಲಿ ಕೂತು, ಹಾಡು ಕೇಳುತ್ತ, ಮರಗಳನ್ನು ಎಣಿಸುತ್ತ, ಗಾಳಿಯ ರಭಸಕ್ಕೆ ಮುಖಕೊಟ್ಟು, ನನ್ನದೇ ನೆನಪಿನ ಅಲೆಯಲ್ಲಿ, ಮನಸ್ಸನ್ನು ನನ್ನ ದೋಣಿಯ ನಾವಿಕನ ಮಾಡಿ, ಯಾರು ಮುಟ್ಟಿರದ ದ್ವೀಪವ ಮುಟ್ಟುವ ತವಕ.

ಹೀಗೆ ಪ್ರತಿದಿನವೂ ನಡೆಸುವ ಪಯಣದಲ್ಲಿ, ಮೂಡೋ ನೆನಪಿನ ಸರಮಾಲೆ ಇದೆಯಲ್ಲ, ಅದರಲ್ಲಿ ಸಿಗುವ ಖುಷಿಗೊ ಏನೋ, ಬಸ್ಸಿಗೂ ನನಿಗೂ ಒಂದು ಅವಿನಾಭಾವ ಸಂಭಂದ. ಒಂದೊಮ್ಮೆ ಪರಮಾತ್ಮನ ಭೇಟಿ ಯಾದರೆ, ನಾ ಕೇಳೋ ವರಗಳಲ್ಲಿ, ನಂಗೆ ಆಸೆ ಆದ ಕೂಡಲೇ ನಿಲ್ಲದೆ ಸಾಗೋ ಬಸ್ಸಲ್ಲಿ ಹತ್ತಿಸಿ, ಕರಗದ ಮುದ್ದಾದ ಹಾಡುಗಳ ಸರಮಾಲೆ ಹಿನ್ನಲೆಯಲ್ಲಿ ಮೂಡಲಿ ಅನ್ನುವ ವರ, ಮೊದಲ ಹತ್ತರಲ್ಲಿ ಇರುವುದಂತೂ ಖಚಿತ.

ಮಂಗಳೂರಿನಲ್ಲಿದ್ದಾಗ ನಡೆಯುತ್ತಿದ್ದ ಈ ಮೇಲಿನ ದಿನಚರಿಯಲ್ಲಿ, ಮೂಡಿದ ಒಂದು ನೆನಪಿನ ಪಯಣದ ಬಗ್ಗೆ ಬರೆಯೋ ಒಂದು ಸಣ್ಣ ಪ್ರಯತ್ನ.

ಅಂದು ಶುಕ್ರವಾರ, ಐಟಿಯಲ್ಲಿ ಕೆಲಸ ಮಾಡುವರಿಗೆಲ್ಲ ಅದೊಂತರ ಹಬ್ಬದ ದಿನ. ನಂಗೆ ಶುಕ್ರವಾರ ಅಂದಾಕ್ಷಣ ಅಂತಹದ್ದೇನು ಆಹ್ಲಾದಕರ ಒಲವಿಲ್ಲದಿದ್ದರು, ನನ್ನ ವೃತ್ತಿಪರ ಜೀವನದಲ್ಲಿ ಒಂದು ವಾರ ಮುಗಿಸಿದ ಧನ್ಯತಾ ಭಾವವಂತೂ ಇದ್ದೇಇತ್ತು. ಹೀಗೆ ನನ್ನ ಮೇಲಿನ ದಿನಚರಿಯಂತೆ ಬಸ್ಸನ್ನು ಹತ್ತಿ, ಕಿವಿಯಡಕ ಸಿಕ್ಕಿಸಿ ಹಾಡು ಕೇಳೋ ಹೊತ್ತಿಗೆ, ಕಣ್ಣು ಅಲ್ಲೇ ಎದುರಿಗೆ ಕೂತಿದ್ದ ಒಂದು ಪುಟ್ಟ ಸಂಸಾರದ ಕಡೆಗೆ ಬಿತ್ತು.

ಅಪ್ಪ, ಅಮ್ಮ, ಅಣ್ಣ ಮತ್ತು ಒಂದು ಮುದ್ದಾದ ತಂಗಿ ಇದ್ದಂತಹ ಸಂಸಾರ ಅದು. ನೋಡಲು ಮಾಧ್ಯಮ ವರ್ಗದ ಸಂಸಾರ ಎನ್ನುವಂತಿತ್ತು. ಅಣ್ಣ-ತಂಗಿ ಇಬ್ಬರು ಅವರ ತಂದೆ ತಾಯಿಯ ಮುಂದೆ ಕೂತಿದ್ದರು. ತಂದೆ ತಾಯಿಗೆ ಸದಾ ತಮ್ಮ ಮಕ್ಕಳ ಮೇಲೇ ಕಣ್ಣು. ಆ ನೋಟದಲ್ಲಿ ಮಕ್ಕಳ ಮೇಲಿನ ಪ್ರೀತಿಯೊಟ್ಟಿಗೆ, ತಮ್ಮ ಮುಂದಿನ ಜೀವನದ ಕನಸ್ಸು ಕೂಡ ಸಾಗಿತ್ತು.

ಆ ಸಂಸಾರವ ನೋಡಿದ ಕ್ಷಣವೇ ನನ್ನ ಮನಸ್ಸು ನನ್ನ ಬಾಲ್ಯದ ಕಡೆ ಮುಖ ಮಾಡಿ ನಿಂತಿತ್ತು. ಹುಟ್ಟಿದ್ದು ಸ್ವಲ್ಪ ಅನುಕೂಲಸ್ಥ ಸಮಯದಲ್ಲಾದರೂ, ನನಗೆ ತಪ್ಪು-ಒಪ್ಪಿನ ಅರಿವು ಮೂಡುವ ಒಳಗೆ, ನನ್ನ ತಂದೆ-ತಾಯಿಯ ಕಷ್ಟಗಳು ಸಾಲಾಗಿ ನಿಂತಿದ್ದವು. ವರುಷಗಳು ಕಳೆದವಾದರೂ ಕಷ್ಟಗಳು ಕರಗಲಿಲ್ಲ. ಸಂಬಂಧಿಗಳ ವಿರೋಧ, ಕುಹಕದ ನಡುವೆಯೂ ಕೂಡ ನನ್ನನು ಊರಲ್ಲಿದ್ದ ಪ್ರತಿಷ್ಠಿತ ಶಾಲೆಗೇ ಸೇರಿಸಿದ್ದರು. ಇನ್ನು ನನ್ನ ತಂಗಿ ಬರುವ ಒಳಗೆ, ನಮ್ಮ ಮನೆಯ ವಿಸ್ತಾರವು ಕಡಿಮೆಯಾಗಿತ್ತು. ತಂಗಿಯನ್ನು ಕೂಡ ಅದೇ ಶಾಲೆಗೇ ಸೇರಿಸಿದ್ದರು. ಪೋಷಕರಿಗೆ ಹಣದ ಕೊರತೆಯಿತ್ತಾದರೂ ಬದುಕಿಗೆ ನಮ್ಮ ಮೂಲಕ ಹೊಸ ಆಯಾಮ ಕೊಡಬೇಕೆಂಬುವ ಆಸೆಗೇನು ಕೊರತೆ ಇರಲಿಲ್ಲ. ಪ್ರತಿವರುಷವು ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಪಡೆಯುತ್ತಿದ್ದ ಕೊನೆ ವಿದ್ಯಾರ್ಥಿಗಳು ನಾವೇ. ಮೊದಲ ವರುಷ ಸ್ವಲ್ಪ ಮುಜುಗರ ಅನ್ನಿಸಿತ್ತಾದರೂ, ನಮ್ಮ ಪೋಷಕರು ಮಾಡುತ್ತಿದ್ದ ಹೋರಾಟದ ಮುಂದೆ ಈ ಮುಜುಗರ ಇಬ್ಬರಿಗೂ ಹೆಚ್ಚನಿಸಲಿಲ್ಲ. ಪೋಷಕರ ಹೋರಾಟ, ಸಂಬಂಧಿಗಳ ವಿರೋಧ-ಕುಹಕ, ಗೆಲ್ಲಬೇಕಂಬ ಆಸೆ, ನಮ್ಮನ್ನು ಜರಿದವರ ಮುಂದೆ ಎದೆಯುಬ್ಬಿಸಿ ನಡೆಯಬೇಕೆಂಬ ಕನಸು, ಎಲ್ಲವು ಸೇರಿ ನಮ್ಮಲ್ಲಿ, ನಮಗೆ ಅರಿವಿಲ್ಲದಂತೆ ಬದುಕುವ ಪಾಠ ತಿಳಿಸಿತ್ತು.

ನಾ ಓದಿದ ಶಾಲೆ, ಪೋಷಕರ ಹೋರಾಟ, ಅಪ್ಪನ ಅಂಗಡಿ, ಕೇಳಿದ್ದು ಸಿಗದ್ದಿದ್ದಾಗ ಮೂಡಿದ್ದ ಸಿಟ್ಟು, ಕತ್ತಲಾದರೂ ನಿಲ್ಲದ ಕ್ರಿಕೆಟ್ ಮ್ಯಾಚುಗಳು, ವಯಸ್ಸು ಇಪ್ಪತ್ತಾದರೂ ಸಿಗುತ್ತಿದ್ದ ಬರಿ ಹತ್ತು ರೂಪಾಯಿ, ಇಂಜಿನೀಯೆರಿಂಗ್ ಮಾಡುತ್ತಿದ್ದರು ನನ್ನ ಕೈಬಿಡದ ನನ್ನ ಸೈಕಲ್, ಸಮಯದ ಪರಿವೆ ಇಲ್ಲದೆ ಹರಟಲು ಸಿಗುತ್ತಿದ್ದ ಗೆಳೆಯರ ಬಳಗ, ಸಣ್ಣಗೆ ಮೂಡಿ ಕರಗೋಗಿದ್ದ ಒಂದು ಕ್ರಶ್, ಪದವಿ ಕಾಲೇಜಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆದ ಘಳಿಗೆ, ಕ್ಯಾಂಪಸ್ ಸೆಲೆಕ್ಷನ್ ಆಗಿದ್ದಾಗ ನನ್ನ ಕಂಡು ನನ್ನ ಅಮ್ಮನಲ್ಲಿ ಮೂಡಿದ್ದ ಸಾರ್ಥಕತೆಯ ಭಾವ,ಅಪ್ಪನಿಗೆ ತನ್ನ ಮಗನ ಮೇಲಿದ್ದ ಹೆಮ್ಮೆಯ ಬಗ್ಗೆ ಅಮ್ಮನಿಂದ ತಿಳಿದಾಗ ಆಗುತ್ತಿದ್ದ ಸಂತಸ, ಎಲ್ಲವು ಒಮ್ಮೆಲೇ ಕಣ್ಣು ಮುಂದೆ ಬಂದು ನಿಂತಂತಾಯಿತು.

ಈ ಅಷ್ಟು ವಿಷಯಗಳ ನಡುವೆ, ಮುಖ್ಯವಾದ ಒಂದಂಶವೆಂದರೆ ನನ್ನ ತಂದೆ-ತಾಯಿ. ಅವರು, ನಾನು ತಪ್ಪು ಮಾಡಿದ್ದಾಗ ತಿದ್ದಿದ್ದಾರೋ ಹೊರತು, ನನ್ನ ಯೋಚನಾ ಶಕ್ತಿಗೆ, ನನ್ನದೇ ರೂಪ ಕೊಡುವ ಸ್ವಾತಂತ್ರಕೊಟ್ಟಿದ್ದರು. ಕಷ್ಟ-ಕಾರ್ಪಣ್ಯಗಳ ನಡುವೆ ಬದುಕಿನ ಸಂತಸಗಳ ಅನುಭವಿಸೋ ಕಲೆ ಧಾರೆಯೆರೆದಿದ್ದರು. ಸೋತಾಗ ಕುಗ್ಗದೆ ಮುನ್ನಡೆಯಲು ಕಲಿಸಿದ್ದರು.

ಒಂದು ಮಗು, ಬೆಳೆದು ದೊಡ್ಡವನಾಗಿ , ತನ್ನ ಕಾಲ ಮೇಲೆ ತಾನು ನಿಲ್ಲುವವರಿಗೆ, ತಂದೆ-ತಾಯಿ ಮಾಡುವ ಹೋರಾಟ, ತ್ಯಾಗಕ್ಕೆಲ್ಲ ಬೆಲೆ ಕಟ್ಟಲು ಸಾಧ್ಯವೇ ಅನ್ನೋ ಸಣ್ಣ ಭಾವ ಮೂಡಿತ್ತು. ಆ ಭಾವದೊಂದಿಗೆ ಕಣ್ಣಾಡಿಸಿದಾಗ ಎದುರಿಗಿದ್ದಿದ್ದು ನನ್ನ ಮನೆಯ ದಾರಿ.ಆ ಭಾವದ ಬೆಳಕಲ್ಲಿ ಮನೆಯ ದಾರಿ ಹಿಡಿದು ನಡದೇ ಬಿಟ್ಟೆ.

ನೆನಪಿನ ದಾರಿಯಲ್ಲಿ ಮತ್ತೊಂದು ನೆನಪಿನೊಂದಿಗೆ ಮತ್ತೆ ಸಿಗೋಣ!